

ಕಂಪ್ಲಿ: ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಾಂಸ್ಥಿಕ ತರಬೇತಿ ಕಾರ್ಯಕ್ರಮ ಗುರುವಾರ ನಡೆಯಿತು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷಾ ಮಾತನಾಡಿ ರೈತರು ಕಡ್ಡಾಯವಾಗಿ ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಪರೀಕ್ಷೆಯ ಶಿಫಾರಸ್ಸಿನ ಆಧಾರದಂತೆ ರಸಗೊಬ್ಬರ ನೀಡಬೇಕು. ಅಧಿಕೃತ ಮಾರಾಟಗಾರರಿಂದ ಕೃಷಿ ಪರಿಕರಗಳನ್ನು ಖರೀದಿಸಬೇಕು. ಮಣ್ಣಿನ ಫಲವತ್ತತೆ ಕಾಪಾಡಲು ರೈತರು ನಿಗಾವಹಿಸಬೇಕು ಎಂದರು.
ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಬೇಸಾಯ ತಜ್ಞ ಎಂ.ಚಂದ್ರಕಾಂತ ಕಾಲಿಬಾವಿ ಮಾತನಾಡಿ, ಭತ್ತ, ಜೋಳ, ಮೆಣಸಿನಕಾಯಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು, ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಯೇಸುಬಾಬು ಕೃಷಿ ಇಲಾಖೆ ಯೋಜನೆಗಳ ಕುರಿತು, ಗಂಗಾವತಿಯ ಕೃಷಿ ಕಾಲೇಜು ಕೀಟಶಾಸ್ತ್ರಜ್ಞ ಡಾ.ಬಸವರಾಜ ಕಾಡಣ್ಣವರ್ ಭತ್ತ, ಮೆಕ್ಕೆಜೋಳ, ಜೋಳ, ಮೆಣಸಿನಕಾಯಿಯಲ್ಲಿ ಬರುವ ಪ್ರಮುಖ ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಹೊಸಮನಿ, ಕೃಷಿ ಅಧಿಕಾರಿ ನವ್ಯಾ ಇತರರಿದ್ದರು.