

ತಿ.ನರಸೀಪುರ: ತಾಲೂಕಿನ ತಲಕಾಡು ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರೈತ ಸಿರಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಣ್ಣು ಪರೀಕ್ಷೆ ಮಹತ್ವ ಮತ್ತು ವಿಧಾನ, ಬೀಜೋಪಚಾರ ಮತ್ತು ರಸಗೊಬ್ಬರ, ಕೀಟನಾಶಕ ಹಾಗೂ ಕಳೆನಾಶಕಗಳ ಪರಿಣಾಮಕಾರಿ ಬಳಕೆ ಹಾಗೂ ಅತಿಯಾದ ಯೂರಿಯಾ ಬಳಕೆಯಿಂದಾಗುವ ಸಮಸ್ಯೆಗಳ ಬಗ್ಗೆ ಸುತ್ತೂರು ಕೃಷಿ ವಿಜ್ಞಾನಿ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್ ಉಪನ್ಯಾಸ ನೀಡಿ, ರೈತರು ಪ್ರತಿ ಎರಡು ವರ್ಷಗಳಿಗೊಮ್ಮೆ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಬೀಜ ತಂತ್ರಜ್ಞಾನ ವಿಭಾಗದ ವಿಷಯ ತಜ್ಞರಾದ ಎಚ್.ವಿ.ದಿವ್ಯಾ ಮಾತನಾಡಿ, ಭತ್ತದ ಅಧಿಕ ಇಳುವರಿಗೆ ರೈತರು ಪಾಲಿಸಬೇಕಾದ ಕ್ರಮಗಳನ್ನು ವಿವರಿಸಿದರು. ಮೈಸೂರು ನ್ಯಾಷನಲ್ ಫರ್ಟಿಲೈಜರ್ಸ್ ಲಿಮಿಟೆಡ್‌ನ ಸಹಾಯಕ ವ್ಯವಸ್ಥಾಪಕ ಕಾಶಪ್ಪ ಮಾತನಾಡಿ, ಕೃಷಿಯಲ್ಲಿ ಸಮತೋಲಿತ ಪೋಷಕಾಂಶಗಳ ಬಳಕೆಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿದರು.
ಪ್ರಾಂಶುಪಾಲ ಡಾ.ಎನ್.ವಸಂತರಾಜು, ಎನ್‌ಎಸ್‌ಎಸ್ ನ ಕಾರ್ಯಕ್ರಮಾಧಿಕಾರಿ ಎಸ್.ರವಿಕುಮಾರ್, ಐಕ್ಯುಎಸಿ ಸಂಚಾಲಕಿ ಡಾ.ಅಶ್ವಿನಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಹದೇವಪ್ರಭು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹರೀಶ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗಣ್ಣ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶೇಖರ್, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ನವೀನ್‌ರಾವ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಹದೇವಮ್ಮ ಇದ್ದರು.