ಉದ್ಯೋಗ ಪಡೆದು ನೆಮ್ಮದಿ ಜೀವನ ನಡೆಸಿ

15 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೇವಲ ಮಹಿಳೆಯರಿಗೆ ಮೀಸಲಾದ ಈ ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆ ಇಲ್ಲದ ಮಹಿಳೆಯರಿಂದ ಉನ್ನತ ಶಿಕ್ಷಣ ಪಡೆದ ಮಹಿಳೆಯರಿಗೆ ಉದ್ಯೋಗಾವಕಾಶ ಇರುವುದು ವಿಶೇಷ. ಉದ್ಯೋಗ ಅವಶ್ಯವಿರುವ ಮಹಿಳೆ ಸಂಕೋಚವಿಲ್ಲದೆ ಮನೆಯಿಂದ ಹೊರ ಬಂದು ಸೂಕ್ತ ಉದ್ಯೋಗ ಅರಸಿಕೊಂಡು ನೆಮ್ಮದಿ ಜೀವನ ನಡೆಸಬೇಕು ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜನತಾ ಶಿಕ್ಷಣ ಸಮಿತಿ ಹಾಗೂ ರಾಪಿಡ್ ಸಂಸ್ಥೆ ಆಶ್ರಯದಲ್ಲಿ ಜೆಎಸ್​ಎಸ್​ನ ಉತ್ಸವ ಭವನದಲ್ಲಿ ಆಯೋಜಿಸಿದ್ದ ಮಹಿಳಾ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮೇಳದಲ್ಲಿ 46 ಕಂಪನಿಗಳಲ್ಲಿ 5000ಕ್ಕಿಂತಲೂ ಹೆಚ್ಚಿನ ಉದ್ಯೋಗಗಳಿಗೆ ಸಂದರ್ಶನ ನಡೆಯಲಿವೆ. ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದ ಕುಲಸಚಿವೆ ಅನುರಾಧ ವಸ್ತ್ರದ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆ ಪ್ರತಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ಉದ್ಯೋಗದಲ್ಲಿ ಮಹಿಳೆ ಹಾಗೂ ಪುರುಷರಿಗೆ ಸಮಾನ ಅವಕಾಶಗಳಿವೆ. ಮನೆ ಕೆಲಸದ ಜತೆಗೆ ಉದ್ಯೋಗ ಮಾಡುವ ಸವಾಲಿನ ಕೆಲಸ ಮಹಿಳೆಯರದ್ದಾಗಿದೆ. ಹಲವಾರು ಸಂಶೋಧನೆಗಳು ಪ್ರಕಾರ ಮಹಿಳೆಯರು ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿವೆ ಎಂದರು.

ರಾಪಿಡ್​ ಸಂಸ್ಥೆ ಕಾರ್ಯದರ್ಶಿ ವಾಣಿಶ್ರೀ ಪುರೋಹಿತ ಮಾತನಾಡಿ, ಜೆಎಸ್​ಎಸ್​ ಶಿಕ್ಷಣ ಮಾತ್ರವಲ್ಲದೆ, ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯ ಎಂದರು.

ನಬಾರ್ಡ ಸಹಾಯ ನಿರ್ದೇಶಕ ಮಯೂರ್​ ಕಾಂಬಳೆ ಮಾತನಾಡಿದರು. ಉದ್ಯೋಗಮೇಳದಲ್ಲಿ 1430 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದು, 170 ಸ್ಥಳದಲ್ಲೇ ಆಯ್ಕೆಯಾದರೆ, 357 ಜನ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮಂಜುನಾಥ ಚಟ್ಟೇರ, ಬಿ.ಎ ತಡಕೋಡ, ವಿಜಯ ಉಪಾಧ್ಯೆ ಇತರರು, ಇತರರು ಇದ್ದರು.

ರಾಪಿಡ್​ ಸಿಇಒ ಮಾಳವಿಕಾ ಕಡಕೋಳ ಸ್ವಾಗತಿಸಿದರು. ಜೆಎಸ್​ಎಸ್​ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ದೇಶಪಾಂಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net