

ವಿರಾಜಪೇಟೆ : ವ್ಯಾಯಾಮ, ಮಿತ ಆಹಾರ ಸೇವನೆಯೊಂದಿಗೆ ಪ್ರತಿಯೊಬ್ಬರೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರ್‌ಐಎಚ್‌ಪಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿ.ಕೆ.ಎನ್ ಚಂದ್ರು ಸಲಹೆ ನೀಡಿದರು.
ಅಮ್ಮತ್ತಿಯ ಆರ್‌ಐಎಚ್‌ಪಿ ಆಸ್ಪತ್ರೆ, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೆದಮುಳ್ಳೂರು ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಗುಂಡಿಕೆರೆ ಶಾಫಿ ಜಮಾಅತ್ ಮದರಸಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಕಾಪಾಡುವಲ್ಲಿ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಮಾಡಿಸುವುದು ಅಗತ್ಯ ಎಂದರು.
ಕೆಡಿಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ರಾಸಾಯನಿಕ ರಹಿತ ಆಹಾರ ಸೇವನೆ ಹಾಗೂ ಕೃಷಿ ಕೆಲಸ ಮಾಡಿಕೊಂಡು ಆರೋಗ್ಯ ಕಾಪಾಡುತ್ತಿದ್ದರು. ಇತ್ತೀಚೆಗೆ ಯಾಂತ್ರಿಕ ಕೆಲಸಗಳು ಹೆಚ್ಚಾಗುತ್ತಿದ್ದಂತೆ ಮಾನವನ ರೋಗಗಳು ಹೆಚ್ಚುತ್ತಿದೆ. ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಬೇಕು ಎಂದರು.
ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಬಡವರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಎಸ್. ನಿಶ್ಚಲಾ, ಮಕ್ಕಳ ತಜ್ಞ ಡಾ.ಕೃಷ್ಣಪ್ರಸಾದ್, ಜನರಲ್ ಸರ್ಜನ್ ಡಾ. ಚಂದ್ರು, ಆಡಳಿತ ಅಧಿಕಾರಿ ಡಾ.ಶುಭಾ ಆರೋಗ್ಯ ತಪಾಸಣೆ ನಡೆಸಿದರು.
ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷ ಮಾಳೇಟಿರ ಜಫ್ರಿ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಎಂ.ಎಂ ಇಸ್ಮಾಯಿಲ್, ಎಚ್.ಆರ್ ವನಿತಾ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೀತಾ, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಕಿಶೋರ್ ಕುಮಾರ್ ಶೆಟ್ಟಿ, ರವಿಕುಮಾರ್ ಹಾಗೂ ಗುಂಡಿಕೆರೆ ಗ್ರಾಮದ ನೂರಾರು ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡರು.