

ಕುಷ್ಟಗಿ: ಕಳೆದೆರಡು ವರ್ಷಗಳಿಂದ ಜೆಸ್ಕಾಂ ಕಚೇರಿಗೆ ಅಲೆದು ಬೇಸತ್ತಿದ್ದ ರಾಚಪ್ಪ ಹಳ್ಳೂರು ನಿರಾಳರಾಗಿದ್ದಾರೆ. ಹೆಚ್ಚುವರಿ ಬಿಲ್ ದೋಷ ಸರಿಪಡಿಸಿರುವ ಜೆಸ್ಕಾಂ ಅಧಿಕಾರಿಗಳು ಗ್ರಾಹಕಗೆ ಗೃಹಜ್ಯೋತಿಯ ಗ್ಯಾರಂಟಿ ನೀಡಿದ್ದಾರೆ.
ಬಳಕೆಗಿಂತ ಹೆಚ್ಚು ಯೂನಿಟ್ ನಮೂದಿಸಿದ್ದ ಮೀಟರ್ ರೀಡರ್‌ನ ಎಡವಟ್ಟಿನಿಂದಾಗಿ ಗ್ರಾಹಕ ರಾಚಪ್ಪಗೆ 18 ಸಾವಿರ ರೂ. ಬಿಲ್ ಬಂದಿತ್ತು. ದೋಷ ಸರಿಪಡಿಸುವಂತೆ ನಿತ್ಯ ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಸಂಬಂಧ ‘ಗೃಹಜ್ಯೋತಿ ಗ್ಯಾರಂಟಿ ಕಸಿದ ಜೆಸ್ಕಾಂ’ ಶೀರ್ಷಿಕೆಯಡಿ ಆ.10ರಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ದೋಷ ಸರಿಪಡಿಸಿದ್ದಾರೆ. ಎರಡು ವರ್ಷದ ಅವಧಿಯ ಪ್ರತಿ ತಿಂಗಳಿಗೆ 100 ರೂ.ನಂತೆ 2400 ರೂ.ಗಳನ್ನು ಗ್ರಾಹಕನಿಂದ ಪಾವತಿಸಿಕೊಂಡು ರಶೀದಿ ನೀಡಿದ್ದು, ಹೆಚ್ಚುವರಿ ಮೊತ್ತವನ್ನು ಮೀಟರ್ ರೀಡರ್‌ನಿಂದ ವಸೂಲಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ದೋಷ ಸರಿಪಡಿಸುವಂತೆ ಕಳೆದೆರಡು ವರ್ಷಗಳಿಂದ ಜೆಸ್ಕಾಂ ಕಚೇರಿಗೆ ಅಲೆದು ಸಾಕಾಗಿತ್ತು. ಸಮಸ್ಯೆ ಮೇಲೆ ಬೆಳಕು ಚೆಲ್ಲಿ ಜನಪರ ಕಾಳಜಿಯಿಂದ ವರದಿ ಪ್ರಕಟಿಸಿರುವ ‘ವಿಜಯವಾಣಿ’ಯಿಂದ ಇಂದು ನಿರಾಳನಾಗಿದ್ದೇನೆ.ರಾಚಪ್ಪ ಹಳ್ಳೂರು, ಗ್ರಾಹಕ, ಕುಷ್ಟಗಿ
ಗ್ರಾಹಕ ರಾಚಪ್ಪ ಹಳ್ಳೂರು ಅವರಿಂದ ಎರಡು ವರ್ಷ ಪ್ರತಿ ತಿಂಗಳಿಗೆ ನೂರು ರೂ.ಗಳಂತೆ ಪಾವತಿಸಿಕೊಂಡು ರಶೀದಿ ನೀಡಲಾಗಿದೆ. ಉಳಿದ ಮೊತ್ತವನ್ನು ಮೀಟರ್ ರೀಡರ್‌ನಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ.ತಾಜುದ್ದೀನ್, ಎಸ್‌ಒ, ಜೆಸ್ಕಾಂ ಉಪ ವಿಭಾಗ, ಕುಷ್ಟಗಿ