

ಹುಮನಾಬಾದ್: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಜತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶ್ರೀ ಮಾಣಿಕಪ್ರಭು ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಆನಂದರಾಜ ಪ್ರಭು ಹೇಳಿದರು.
ಮಾಣಿಕನಗರದ ಶ್ರೀ ಸಿದ್ಧರಾಜ ಪ್ರಭು ಕ್ರಿಕೆಟ್ ಮೈದಾನದಲ್ಲಿ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಭಾನುವಾರ ಹಮ್ಮಿಕೊಂಡಿದ್ದ ಅಂತರ ಉಪ ವಿಭಾಗ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಮನಸ್ಸು ಉಲ್ಲಸಿತ ಮತ್ತು ದೇಹ ಸದೃಢವಾಗಿರುತ್ತದೆ. ಕ್ರೀಡಾಕೂಟಗಳಿಂದ ಯುವ ಪಟುಗಳಲ್ಲಿ ಶಕ್ತಿ ಹೆಚ್ಚುತ್ತದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುವವರು ಜೀವನದ ಎಲ್ಲ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ಪರಸ್ಪರ ಪ್ರೀತಿ, ಪ್ರೇಮ ಹಾಗೂ ಸೌಹಾರ್ದದಿಂದ ಬಾಳಲು ಕ್ರೀಡೆ ಸಹಕಾರಿ ಎಂದರು.
ಕಾರ್ಯನಿರ್ವಾಹಕ ಅಭಿಯಂತರ ಶಂಕರ ಅಡಕಿ ಮಾತನಾಡಿ, ಯುವಕರು ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಕ್ರೀಡೆಯತ್ತ ಹೆಚ್ಚು ಗಮನಹರಿಸಬೇಕು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಎಲ್ಲರೂ ತೀರ್ಪುಗಾರರ ತೀರ್ಮಾನಕ್ಕೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.
ಎಇಇ ಸಂತೋಷ ಮಟ್ಟಿ, ಗುರುಶಾಂತ ವಾರದ, ರಾಹುಲ್ ಇಜಾರೆ, ಸೂರ್ಯಕಾಂತ ಪಾಟೀಲ್, ವೀರೇಶ, ಸಹಾಯಕ ಇಂಜಿನಿಯರ್ ಅರವಿಂದ ಧುಮಾಳೆ, ರವಿಕುಮಾರ, ಇಮ್ರಾನ್, ದಯಾನಂದ ಪಾಟೀಲ್, ಪ್ರಕಾಶ ವರ್ಮಾ, ಗಣಪತಿ ಖೇಣಿಕರ್ ಇತರರಿದ್ದರು.