

ಪ್ರಮುಖ ಮುಖ್ಯಾಂಶಗಳು
ಮಂಗಳೂರು: ಗೇರು ಹಣ್ಣಿನ ಹತ್ತಾರು ತಳಿಗಳು, ವಿವಿಧ ರೀತಿಯ ತರಹೇವಾರಿ ಗೇರುಬೀಜಗಳು (ಗೋಡಂಬಿ) ನೋಡುಗರ ಗಮನ ಸೆಳೆದವು.ರಾಜ್ಯ ಗೇರು ಅಭಿವೃದ್ಧಿ ನಿಗಮ ಮತ್ತು ರಾಜ್ಯ ಅರಣ್ಯ ಇಲಾಖೆ ವತಿಯಿಂದ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗೇರು ಮೇಳ ಹಾಗೂ ಕಾರ್ಯಾಗಾರದಲ್ಲಿ ಈ ನೋಟ ಕಂಡುಸಿಕ್ಕಿತು.
ಗೇರು ಹಣ್ಣಿನ ಜ್ಯೂಸ್‌ಗಳ ವಿವಿಧ ಮಳಿಗೆಗಳು ಗಮನ ಸೆಳೆದವು. ಗೇರು ಹಣ್ಣನ್ನು ಸಂಸ್ಕರಿಸಿದ ಮೇಲೆ ಹೆಚ್ಚು ದಿನ ಇಡಲು ಸಾಧ್ಯವಿಲ್ಲ. ಹಾಗಾಗಿ ಗೇರು ಜ್ಯೂಸ್ ಸ್ವಲ್ಪ ದುಬಾರಿಯಾಗಿತ್ತು. 1 ಗ್ಲಾಸ್‌ಗೆ 50 ರೂ. ದರವಿತ್ತು. ಆದರೆ ಕುಡಿಯಲು ಅಷ್ಟೇ ಸ್ವಾದಿಷ್ಟಕರವಾಗಿತ್ತು. ಇದು ಹೋಮ್ ಮೇಡ್ ಜ್ಯೂಸ್ ಆಗಿತ್ತು. ಸಣ್ಣ ಪ್ರಾಯದಲ್ಲಿ ಗೇರು ಮರ ಹತ್ತಿ ಗೇರು ಹಣ್ಣು ಕಿತ್ತು ತಿನ್ನುತ್ತಿದ್ದ ಸಂದರ್ಭದ ಸವಿದ ಅದೇ ರುಚಿಯೇ ಗೇರು ಜ್ಯೂಸ್‌ನಲ್ಲಿತ್ತು. ಮೇಳದ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಉಚಿತವಾಗಿ ಗೇರು ಹಣ್ಣಿನ ಜ್ಯೂಸ್ ನೀಡಲಾಗಿತ್ತು.
ಕಸಿ ಮಾಡಿದ ವಿವಿಧ ರೀತಿಯ ಗೇರು ಹಣ್ಣಿನ ಕಸಿ ಗಿಡಗಳ ಜೊತೆ ಇತರ ಹಣ್ಣುಗಳ ಕಸಿ ಸಸಿಗಳು ಪ್ರದರ್ಶನದಲ್ಲಿದ್ದವು. ಅದರೊಂದಿಗೆ ಬಗೆಬಗೆಯ ಮಾವುಗಳು, ಹಲಸು ಇನ್ನಿತರ ಹಣ್ಣುಗಳಿದ್ದವು. ಸ್ಥಳದಲ್ಲೇ ಹಣ್ಣುಗಳ ಬಗೆಬಗೆಯ ಜ್ಯೂಸ್‌ಗಳು, ಐಸ್‌ಕ್ರೀಮ್‌ಗಳು ಲಭ್ಯವಿದ್ದವು. ವಿವಿಧ ತರಕಾರಿಗಳ ಬೀಜಗಳು, ದ್ರಾಕ್ಷಿ, ಗಾಂಧಾರಿ ಮೆಣಸು, ಗೇರು ಹಣ್ಣಿನ ವೈನ್‌ಗಳಿದ್ದವು. ಜೇನು, ಉಪ್ಪಿನಕಾಯಿ, ಕಲ್ಲಂಗಡಿ ಸಹಿತ ವಿವಿಧ ಆಹಾರೋತ್ಪನ್ನ, ಡ್ರೆಸ್ ಇನ್ನಿತರ ಮಳಿಗೆಗಳು ಪ್ರದರ್ಶನದೊಂದಿಗೆ ಉತ್ತಮ ಮಾರಾಟವನ್ನು ನಡೆಸಿದೆ. ಗೃಹೋಪಯೋಗಿ ಸೊತ್ತುಗಳೇ ಹೆಚ್ಚಾಗಿದ್ದವು.
70ಕ್ಕೂ ಅಧಿಕ ಸ್ಟಾಲ್‌ಗಳಿದ್ದವು. ಭಾನುವಾರವಾಗಿದ್ದರಿಂದ ಮೇಳದಲ್ಲಿ ಜನಜಂಗುಳಿ ಇತ್ತು.ಉಳ್ಳಾಲ-1, ಉಳ್ಳಾಲ-2, ಉಳ್ಳಾಲ-3, ಉಳ್ಳಾಲ-4, ಯು.ಎನ್. 50, ಚಿಂತಾಮಣಿ-1, ಧನ, ಎನ್‌ಆರ್‌ಸಿಸಿ-2, ವೆಂಗುರ್ಲಾ-4, ವೆಂಗುರ್ಲಾ-7, ವೆಂಗುರ್ಲಾ-9, ಪ್ರಿಯಾಂಕಾ, ನೇತ್ರಗಂಗಾ, ನೇತ್ರ ಜಂಬೂ, ನೇತ್ರ ಉಭಯ, ಭಾಸ್ಕರ, ವಿಆರ್‌ಐ3 ಮೊದಲಾದ ತಳಿಗಳ ಪ್ರದರ್ಶನ ಸ್ಟಾಲ್‌ಗಳಲ್ಲಿ ಇತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಟಾಲ್‌ಗಳಿಗೆ ಭೇಟಿ ಮಾಹಿತಿ ಪಡೆದರು.
ಮೇಳದ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿತ್ರ ಬರೆದ ಚಿಣ್ಣರೊಂದಿಗೆ ಕೆಲ ಸಮಯ ಕಳೆದ ಸಚಿವರು, ಮಕ್ಕಳನ್ನು ಅಭಿನಂದಿಸಿದರು.
ಗೋಡಂಬಿ ಕೃಷಿ ಮತ್ತು ಆಧುನಿಕ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರ ನಡೆಯಿತು. ಸೋಮವಾರವೂ ಕಾರ್ಯಾಗಾರ, ಮಾರಾಟ, ಪ್ರದರ್ಶನ ಇರಲಿದೆ.
ಗೇರು ಹಣ್ಣಿನಲ್ಲಿ ಪೌಷ್ಟಿಕಾಂಶ ಹೇರಳವಾಗಿದೆ. ಕಿತ್ತಳೆ ಹಣ್ಣಿಗೆ ಹೋಲಿಸಿದರೆ ಗೇರು ಹಣ್ಣಿನಲ್ಲಿ ಸುಮಾರು 5 ಪಟ್ಟು ಹೆಚ್ಚು ವಿಟಮಿನ್ ಸಿ ಇರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ರಾಮಬಾಣ. ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಚರ್ಮದ ಆರೋಗ್ಯ ಮತ್ತು ವೃದ್ಧಾಪ್ಯದ ಲಕ್ಷಣಗಳನ್ನು ತಡೆಯಲು ಸಹಕಾರಿ. ಮಲಬದ್ಧತೆ ನಿವಾರಣೆಗೆ ಮತ್ತು ಜೀರ್ಣಕ್ರಿಯೆ ಸುಧಾರಿಸಲೂ ಗೇರುಹಣ್ಣು ಸಹಕಾರಿ.