ಸರ್ಕೀಟ್ ಹೌಸ್- ಬಿಜೈ ಸರ್ಕಲ್ ರಸ್ತೆಗೆ ಜಾರ್ಜ್ ಫನಾರ್ಂಡಿಸ್ ರಸ್ತೆ ನಾಮಕರಣ

mng-july6-gorge Fernandez
Published on

ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ನಗರದ ಸರ್ಕೀಟ್ ಹೌಸ್ ಬಳಿಯಿಂದ ಬಿಜೈ ಸರ್ಕಲ್ ವರೆಗಿನ ರಸ್ತೆಗೆ ಜಾರ್ಜ್ ಫನಾರ್ಂಡಿಸ್ ರಸ್ತೆ ಎಂದು ಶನಿವಾರ ಅಧಿಕೃತವಾಗಿ ನಾಮಕರಣಗೊಳಿಸಲಾಯಿತು.


ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ದಕ್ಷಿಣ ಭಾರತದಲ್ಲಿ ಜನಿಸಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದವರು ಜಾರ್ಜ್ ಫನಾರ್ಂಡಿಸ್. ವಾಜಪೇಯಿಯವರ ಜೊತೆ ಎನ್‌ಡಿಎ ಸೇರಿ ರೈಲ್ವೆ ಸಚಿವರಾಗಿ ಅಭೂತ ಪೂರ್ವ ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಮೂಲೆಗುಂಪಾಗಿದ್ದ ಕೊಂಕಣ ರೈಲ್ವೆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡು ಅದಕ್ಕೆ ಜೀವಕೊಟ್ಟು ಯೋಜನೆಯನ್ನು ಸಾಕಾರಗೊಳಿಸಿದ ಕೀರ್ತಿ ಜಾರ್ಜ್‌ರದ್ದು. ದೇಶದ ರಕ್ಷಣಾ ಸಚಿವರಾಗಿ ಕೈಗೊಂಡ ಕ್ಷಿಪ್ರ ನಿರ್ಧಾರಗಳು, ಮಾಡಿದ ಕೆಲಸಗಳ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆಯಿದೆ. ಸಿಯಾಚಿನ್ ನಂತಹ ಪ್ರದೇಶಕ್ಕೆ ಹದಿನೆಂಟು ಸಲ ಭೇಟಿ ನೀಡಿದ ಏಕಮಾತ್ರ ರಕ್ಷಣಾ ಸಚಿವ ಅವರಾಗಿದ್ದು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದರು. ಜಾರ್ಜ್, ವಾಜಪೇಯಿ, ಅಡ್ವಾಣಿಯವರ ಮಧ್ಯೆ ಅದಮ್ಯ ದೇಶ ಪ್ರೇಮದ ಒಲವಿದ್ದದ್ದು ವಿಶೇಷ. ಇವರ ಜೀವನಗಾಥೆ ಮುಂದಿನ ಹಲವು ತಲೆಮಾರುಗಳಿಗೆ ಆದರ್ಶ ಮತ್ತು ಸ್ಪೂರ್ತಿಯಾಗಿದ್ದು ಇಂತಹ ಶ್ರೇಷ್ಠ ವ್ಯಕ್ತಿತ್ವದ ಹೆಸರನ್ನು ಮಂಗಳೂರಿನ ಈ ರಸ್ತೆಗೆ ಇಡುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.


ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಐವನ್ ಡಿಸೋಜ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು,ಉಪ ಮೇಯರ್ ಸುನಿತಾ, ಬಿಜೈ ಚರ್ಚ್ ನ ಧರ್ಮಗುರು ಜೆ.ಬಿ. ಸಾಲ್ದಾನ, ವಿಶೇಷ ಅತಿಥಿಗಳಾಗಿ ಜಾರ್ಜ್ ಫನಾರ್ಂಡಿಸ್ ರ ಸಹೋದರ ಮೈಕಲ್ ಫನಾರ್ಂಡಿಸ್, ಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್‌ಚಂದ್ರ ಆಳ್ವ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸದಸ್ಯರಾದ ಶಶಿಧರ ಹೆಗ್ಡೆ,ಶಕೀಲಾ ಕಾವಾ, ಗಣೇಶ್, ವರುಣ್ ಚೌಟ,ಲ್ಯಾನ್ಸ್ ಲೋಟ್ ಪಿಂಟೋ, ಮಾಜಿ ಸಚಿವ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net