ಜೈಲಿನಲ್ಲಿದ್ದೇ ಸಂಸತ್‌ಗೆ ಚುನಾಯಿತರಾದ ಕುಡ್ಲದ ಮಣ್ಣಿನ ಮಗ ಜಾರ್ಜ್

fffffffffffffff
Published on


* ಪಿ.ಬಿ.ಹರೀಶ್ ರೈ

ಮಂಗಳೂರು : ಕರಾವಳಿಯ ರಾಜಕೀಯ ನಾಯಕರು ಸ್ವಕ್ಷೇತ್ರದಲ್ಲೇ ಮಿಂಚಿದರೆ ಮಂಗಳೂರಿನ ಮಣ್ಣಿನ ಮಗ ಜಾರ್ಜ್ ಫೆರ್ನಾಂಡಿಸ್ ದೂರದ ಮುಂಬೈ ಹಾಗೂ ಬಿಹಾರದಲ್ಲಿ ತನ್ನ ಸಾಮರ್ಥ್ಯ ಮೆರೆದವರು. ಜೈಲಿನಲ್ಲಿದ್ದೇ ಸಂಸತ್‌ಗೆ ಚುನಾಯಿತರಾದ ಪ್ರಭಾವಿ ಕಾರ್ಮಿಕ ನಾಯಕ. 9 ಬಾರಿ ಸಂಸತ್ ಪ್ರವೇಶಿಸಿ, ರೈಲ್ವೆ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದವರು. ಕೊಂಕಣ ರೈಲ್ವೆ ಯೋಜನೆ ಜಾರ್ಜ್ ಕರಾವಳಿಗೆ ನೀಡಿದ ಶಾಶ್ವತ ಕೊಡುಗೆ.
ಮಂಗಳೂರಿನ ಬಿಜೈ ಕಾಪಿಕಾಡ್‌ನಲ್ಲಿ ಹುಟ್ಟಿ ಬೆಳೆದ ಜಾರ್ಜ್ ಫೆರ್ನಾಂಡಿಸ್ ಸೈಂಟ್ ಅಲೋಶಿಯಸ್‌ನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದವರು. ಬಳಿಕ ಜಾರ್ಜ್‌ರನ್ನು ಅವರ ಹೆತ್ತವರು ಧಾರ್ಮಿಕ ಶಿಕ್ಷಣ ಪಡೆಯಲು ಬೆಂಗಳೂರಿನ ಸೈಂಟ್ ಪೀಟರ್ಸ್‌ ಸೆಮಿನರಿಗೆ ಸೇರಿಸಿದ್ದರು. ಆದರೆ ಹುಟ್ಟು ಹೋರಾಟಗಾರ ಜಾರ್ಜ್ ತುಳಿದ ಹಾದಿಯೇ ಬೇರೆ. ಸೆಮಿನರಿ ತೊರೆದು ಕಾರ್ಮಿಕ ಚಳುವಳಿಗೆ ಧುಮುಕಿದರು.
* ಕಾರ್ಮಿಕ ನೇತಾರ
ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿದ ಜಾರ್ಜ್ ಅವರ ಬದುಕಿನ ಹಾದಿ ಬದಲಾಯಿತು. ಅಲ್ಲಿ ಕಾರ್ಮಿಕ ಹೋರಾಟದಿಂದ
ಜನಪ್ರಿಯರಾದ ಅವರು 1961ರಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿ ಚುನಾಯಿತರಾದರು. 1967ರ ಲೋಕಸಭೆ ಚುನಾವಣೆಯಲ್ಲಿ ಸಂಯುಕ್ತ ಸೋಶಲಿಸ್ಟ್ ಪಾರ್ಟಿ ಅವರಿಗೆ ಬಾಂಬೆ ಸೌತ್ ಕ್ಷೇತ್ರದ ಟಿಕೆಟ್ ನೀಡಿತು. ಕಾಂಗ್ರೆಸ್‌ನ ಬಲಿಷ್ಠ ನಾಯಕ ಎಸ್.ಕೆ.ಪಾಟೀಲ್ ಅವರನ್ನೇ ಸೋಲಿಸಿದ ಜಾರ್ಜ್ ರಾಷ್ಟ್ರ ರಾಜಕೀಯದ ಗಮನ ಸೆಳೆದರು.
* ಜೈಲಿನಿಂದಲೇ ಗೆದ್ದರು :
ರೈಲ್ವೆ ನೌಕರರ ಹೋರಾಟದ ಮುಂಚೂಣಿಯಲ್ಲಿದ್ದ ಜಾರ್ಜ್ 1975ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದಾಗ ಸಿಡಿದೆದ್ದರು. ಬರೋಡಾದಲ್ಲಿ ಡೈನಮೆಟ್ ಬಳಸಿ ಸ್ಪೋಟ ನಡೆಸಲು ಉದ್ದೇಶಿಸಿದ ಆರೋಪದ ಹಿನ್ನೆಲೆಯಲ್ಲಿ
ಜಾರ್ಜ್ ಅವರ ಬಂಧನವಾಯಿತು. ಬಿಹಾರದಲ್ಲಿ ಸೆರೆಮನೆ ವಾಸ ಅನುಭವಿಸಿದರು. 1977ರ ಮಹಾ ಚುನಾವಣೆಯಲ್ಲಿ ಜಾರ್ಜ್ ಜೈಲಿನಲ್ಲಿದ್ದೇ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಿಹಾರದ ಮುಜಾಫರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದರು. 3 ಲಕ್ಷ ಮತಗಳ ಅಂತರದ ಜಯ ಸಾಧಿಸಿ ಮೊರಾರ್ಜಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾದರು.
* ಬೆಂಗಳೂರಿನಲ್ಲಿ ಸೋತರು :
ಮೂಲ ಜನತಾ ಪಾರ್ಟಿ ಒಡೆಯಿತು. 80ರ ಚುನಾವಣೆಯಲ್ಲಿ ಮುಜಾಫರ್‌ಪುರ ಕ್ಷೇತ್ರದಲ್ಲಿ ಜನತಾ (ಎಸ್) ಪಕ್ಷದಿಂದ ಸ್ಪರ್ಧಿಸಿ ಗೆದ್ದರು. 84ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಜಾಫರ್ ಶರೀಫ್ ವಿರುದ್ಧ ಸೋಲು ಕಂಡರು. ಮತ್ತೆ ಬಿಹಾರದತ್ತ ಮುಖ ಮಾಡಿದ ಜಾರ್ಜ್ ಅವರಿಗೆ ಸತತ ಗೆಲುವು. ಮುಜಾಫರ್‌ಪುರ ಕ್ಷೇತ್ರದಿಂದ ಒಟ್ಟು 5 ಬಾರಿ ಹಾಗೂ ನಳಂದ ಕ್ಷೇತ್ರದಿಂದ 3 ಬಾರಿ ಸಂಸದರಾದರು. ಜನತಾ ದಳ ಸೇರಿದ ಅವರು ವಿ.ಪಿ.ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾದರು.
*ಎನ್‌ಡಿಎ ಸಂಚಾಲಕ :
ಜನತಾ ದಳ ಒಡೆದಾಗ ಸಮತಾ ಪಾರ್ಟಿ ಕಟ್ಟದ ಜಾರ್ಜ್ ಎನ್‌ಡಿಎ ಸಂಚಾಲಕರಾಗಿ ವಾಜಪೇಯಿ ಸರ್ಕಾರಕ್ಕೆ ಮುನ್ನುಡಿ ಬರೆದರು. ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು. ಎನ್‌ಡಿಎ ಸರ್ಕಾರ ಪತನದ ಬಳಿಕ ಸಮತಾ ಪಾರ್ಟಿ ಜೆಡಿಯುನಲ್ಲಿ ವಿಲೀನವಾಯಿತು. ಅಲ್ಜಿಮರ್ಸ್‌ (ಮರೆವು ಕಾಯಿಲೆ)ನಿಂದ ಬಳಲಿದ ಜಾರ್ಜ್ ಅವರ ಆರೋಗ್ಯವೂ ಹದಗೆಟ್ಟಿತು. 2009ರ ಚುನಾವಣೆಯಲ್ಲಿ ಜೆಡಿಯು ಟಿಕೆಟ್ ನಿರಾಕರಿಸಿದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಸೋತರು. ಬಳಿಕ ಒಂದು ವರ್ಷ
ರಾಜ್ಯಸಭಾ ಸದಸ್ಯರಾಗಿದ್ದ ಜಾರ್ಜ್ 2019ರಲ್ಲಿ ನಿಧನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net