

ಹುಕ್ಕೇರಿ: ಸಾಮ್ರಾಜ್ಯಗಳು ನಂಬಿಕೆ, ಮೋಸದಿಂದ ಹಾಳಾಗಿವೆ. ಅದೇ ರೀತಿ ಇಂದಿನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿಯೂ ನಂಬಿಕೆದ್ರೋಹದ ಸಂಚು ರೂಪಿಸಲಾಗುತ್ತಿದೆೆ ಎಂದು ಮಾಜಿ ಸಂಸದ ರಮೇಶ ಕತ್ತಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅಡವಿಸಿದ್ದೇಶ್ವರ ಮಠದ ಬಳಿ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿ, ಯುವ ಜನಾಂಗ ಮಹನೀಯರ ಚರಿತ್ರೆ ಮತ್ತು ಇತಿಹಾಸ ತಿಳಿದುಕೊಳ್ಳಬೇಕು.
ಸಂಕೇಶ್ವರ ಮತ್ತು ಹುಕ್ಕೇರಿಯಲ್ಲಿ ಬಸವಣ್ಣ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ ಸೇರಿ 11 ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ರಾಜೇಶ್ವರಿ ಮತ್ತು ವಿಶ್ವನಾಥ ಕತ್ತಿ ಚಾರಿಟಬಲ್ ಟ್ರಸ್ಟ್ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರಲ್ಲಿದ್ದ ರಾಷ್ಟ್ರೀಯತೆ, ಹಿಂದುತ್ವ ಭಾವನೆ ಹಾಗೂ ತತ್ತ್ವಾದರ್ಶ ಪಾಲಿಸಬೇಕು. ಆಗ ಮೂರ್ತಿ ಪ್ರತಿಷ್ಠಾಪನೆ ಸಾರ್ಥಕವಾಗುತ್ತದೆ ಎಂದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಸಂಕೇಶ್ವರ ಶಂಕರಾಚಾರ್ಯ ಮಠದ ಜಗದ್ಗುರು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಮತ್ತು ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು. ಮಾಜಿ ಸಂಸದ ರಮೇಶ ಕತ್ತಿ ಮೂರ್ತಿ ಅನಾವರಣಗೊಳಿಸಿದರು.
ಶಾಸಕ ನಿಖಿಲ ಕತ್ತಿ, ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ, ಸೀಮಾ ಹತನೂರೆ, ಹುಕ್ಕೇರಿ ಮರಾಠ ಸಮುದಾಯದ ಅಧ್ಯಕ್ಷ ಪುಟ್ಟು ಖಾಡೆ, ಮುಖಂಡರಾದ ಸತ್ತೆಪ್ಪ ನಾಯಿಕ, ರಾಯಪ್ಪ ಡೂಗ, ಜಯಗೌಡ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಮಹಾವೀರ ನಿಲಜಗಿ, ಕಿರಣಸಿಂಗ ರಜಪೂತ, ಅಶೋಕ ಪಟ್ಟಣಶೆಟ್ಟಿ, ಪ್ರಜ್ವಲ ನಿಲಜಗಿ, ಶೀತಲ ಬ್ಯಾಳಿ, ಪಿಂಟು ಶೆಟ್ಟಿ, ಅಪ್ಪುಸ್ ತುಬಚಿ, ಸುಹಾಸ ನೂಲಿ, ರಾಜು ಮುನ್ನೋಳಿ ಇತರರಿದ್ದರು.