ಮಹನೀಯರು ಜಾತಿಗೆ ಸೀಮಿತ ಅಪಾಯ: ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ

3
Published on

ಮೈಸೂರು: ತಮ್ಮ ಕಾಲದಲ್ಲಿ ವ್ಯವಸ್ಥೆ ವಿರುದ್ಧ ಹೋರಾಟವನ್ನೇ ಮಾಡಿದ್ದ ಕನಕದಾಸರು, ಜಾತಿ ವ್ಯವಸ್ಥೆ, ಶೋಷಣೆ ಕುರಿತು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತಿಪಾದಿಸಿದರು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಭಿಪ್ರಾಯಪಟ್ಟರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಸಂಗೀತ ವಿವಿಯಲ್ಲಿ ಆಯೋಜಿಸಿರುವ ‘ತತ್ವಪದಗಳು ಮತ್ತು ಸಂಗೀತ ವೈವಿಧ್ಯ’ ಎರಡು ದಿನಗಳ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೀರ್ತನೆಗಳ ಬರೆದು ಊರೂರು ಸುತ್ತಾಡಿ ಜನರಲ್ಲಿ ಜಾತಿ ವ್ಯವಸ್ಥೆ, ಶೋಷಣೆ ವಿರುದ್ಧ ಅರಿವು ಮೂಡಿಸಿದರು. ವಿಷಾದವೆಂದರೆ ಕನಕದಾಸರ ಕಾಲದಲ್ಲಿ ಇದ್ದ ಜಾತಿ, ಶೋಷಣೆ, ಮೇಲು-ಕೀಳು ಎನ್ನುವ ಭಾವನೆ ಇಂದಿಗೂ ಜೀವಂತವಾಗಿವೆ ಎಂದು ವಿಷಾದಿಸಿದರು.

ಇತ್ತೀಚಿನ ದಿನಗಳಲ್ಲಿ ಸಂತರು, ದಾರ್ಶನಿಕರು, ಮಹಾಪುರುಷರನ್ನು ಜಾತಿಗೆ ಸೀಮಿತ ಮಾಡುವುದು ಅಪಾಯಕಾರಿಯಾಗಿದೆ. ಅವರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ ಅಪಮಾನ ಮಾಡಲಾಗುತ್ತಿದೆ. ಬುದ್ಧ, ಬಸವ, ಕನಕದಾಸರ ಆಶಯಗಳನ್ನು ಸಂವಿಧಾನದಲ್ಲಿ ಸೇರಿಸಿದ ಅಂಬೇಡ್ಕರ್ ಅವರನ್ನು ಜಾತಿಯಿಂದ ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಚಕ್ಕೆರೆ ಶಿವಶಂಕರ್ ಮಾತನಾಡಿ, ತತ್ವಪದಕಾರರು ಅಕ್ಷರ ಕಲಿತವರಲ್ಲದಿದ್ದರೂ ಲೋಕ ಜ್ಞಾನಿಗಳಾಗಿದ್ದರು. ಜತೆಗೆ ಅಸಾಧಾರಣ ಲೋಕ ಗ್ರಹಿಕೆಯುಳ್ಳವರಾಗಿದ್ದರು ಎಂದು ಹೇಳಿದರು.

ಅರಸೊತ್ತಿಗೆ, ವೈದಿಕ ಸಂಸ್ಕೃತಿ, ಪಟ್ಟಭದ್ರ ಹಿತಾಸಕ್ತಿಗಳಿಂದ ಅಸ್ಪಶ್ಯತೆ, ಅಸಮಾನತೆ, ವರ್ಗಪದ್ಧತಿ, ಸ್ತ್ರೀ ಶೋಷಣೆಯಿಂದ ಜನ ಜೀವನ ಪ್ರಕ್ಷುಬ್ಧವಾಗಿದ್ದ ಕಾಲದಲ್ಲಿ ತತ್ವಪದಕಾರರು ಬಂಡೆದ್ದು ಬಂದವರು ಎಂದು ವಿಶ್ಲೇಷಿಸಿದರು.

ತತ್ವಪದದ ಅರ್ಥಗಳು ನಿಗೂಢವಾದರೂ ವರ್ತಮಾನದ ಬದುಕಿನೊಂದಿಗೆ ಅನುಸಂಧಾನ ನಡೆಸುತ್ತವೆ. ಭಾರತದಲ್ಲಿ ಬಹುತ್ವ ನಾಶವಾಗುತ್ತಿರುವಾಗ ತತ್ವಪದಕಾರರು ಚಿಂತನೆಯನ್ನು ಮೆಲುಕು ಹಾಕಬೇಕಾಗಿದೆ. ಎರಡು ಶತಮಾನಗಳವರೆಗೂ ತತ್ವಪದಕಾರರನ್ನು ಅಕ್ಷರಸ್ಥ ಲೋಕ ಅವಜ್ಞೆಯಿಂದ ಕಡೆಗಣಿಸಿತ್ತು. ಇತ್ತೀಚೆಗೆ ತತ್ವಪದಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಲೋಕಗ್ರಹಿಕೆಯೊಂದಿಗೆ ಸಂಗೀತದ ರಾಗ, ಲಯ, ತಾಳ ಬಲ್ಲವರಾಗಿದ್ದರು. ಹಾಗಾಗಿ ತತ್ವಪದ-ಸಂಗೀತದ ಅಂತರ್ ಶಿಸ್ತೀಯ ಅಧ್ಯಯನ ನಡೆಸಬೇಕಾಗಿದೆ. ಸಾಧಕರೊಂದಿಗೆ ಅನುಸಂಧಾನ ನಡೆಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ. ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net