ಪ್ರತಿಭೆ ಗುರುತಿಸುವ ಕಾರ್ಯ ನಿರಂತರ ನಡೆಯಲಿ

YMK
11ನೇ ಸತೀಶ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭ ಉದ್ದೇಶಿಸಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿದರು. ಯುವ ನಾಯಕ ರಾಹುಲ್ ಜಾರಕಿಹೊಳಿ, ಸುರೇಶ ಜೋರಾಪೂರ, ಈರಣ್ಣಾ ಬಿಸಿರೊಟ್ಟಿ, ದಸ್ತಗೀರ ಬಸ್ಸಾಪೂರೆ ಇತರರಿದ್ದರು.
Published on

ಯಮಕನಮರಡಿ: ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಅವರು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ. ಈ ಕಾರ್ಯ ನಿತ್ಯ ನಿರಂತರ ನಡೆಯಲಿ ಎಂದು ಹತ್ತರಗಿ ಕಾರಿಮಠದ ಶ್ರೀಗುರುಸಿದ್ದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಯಮಕನಮರಡಿ ಎನ್‌ಎಸ್‌ಎ್ ಶಾಲಾ ಆವರಣದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ 11 ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೊದಲ ಸತೀಶ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿಯೇ ನಿಮ್ಮ ಪ್ರಯತ್ನಕ್ಕೆ ನಮ್ಮ ಪ್ರೋತ್ಸಾಹ ಇದೆ ಎಂದು ಸಚಿವ ಸತೀಶ ಹೇಳಿದ್ದರು. ಅದೇ ರೀತಿ ಹತ್ತು ವರ್ಷಗಳ ಕಾಲ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ ಈಗ 11ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯಕ್ರಮದಿಂದ ನಮ್ಮ ಭಾಗದ ಅನೇಕ ಪ್ರತಿಭೆಗಳು ನಾಡಿಗೆ ಚಿರಪರಿಚಿತ ಆಗುವಂತೆ ಆಗಿದೆ. ಇದಕ್ಕೆಲ್ಲ ಸತೀಶ ಜಾರಕಿಹೊಳಿ ಕಾರಣ ಎಂದು ಹೇಳಿದರು.

ಕಳೆದ ಎರಡು ದಿನಗಳಿಂದ ಯಮಕನಮರಡಿಯಲ್ಲಿ ಅದ್ದೂರಿಯಾಗಿ ಜರಗುತ್ತಿರುವ ಈ ಕಾರ್ಯಕ್ರಮ ಅತ್ಯಂತ ಯಶಸ್ಸು ಕಂಡಿದೆ. ಈ ಕಾರ್ಯಕ್ರಮದ ಮೂಲಕ ಸಾವಿರಾರು ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಿದ್ದು ಬಹಳ ಸಂತೋಷದ ವಿಷಯ. ಕಲೆ ಯಾರ ಸ್ವತ್ತು ಅಲ್ಲ, ಅದು ಕಲಾವಿದನ ಸಂಪತ್ತು.ಕಲೆ ಇದ್ದವರು ಎಲ್ಲಿಯಾದರೂ ಬದುಕ ಬಲ್ಲರು ಎಂದರು.

ಹತ್ತರಗಿಯ ಹರಿ ಮಂದಿರದ ಆನಂದ ಮಹಾರಾಜ ಗೋಸಾವಿ ಮಾತನಾಡಿ, ಜಾನಪದ ಕಲೆ ನಶಿಸಿ ಹೋಗುತ್ತಿರುವ ಕಾಲದಲ್ಲಿ ಜಾನಪದ ಕಲೆ ಉಳಿಸಿ, ಬೆಳೆಸುವ ಮೂಲಕ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯ ಅನನ್ಯ. ಅವರಲ್ಲಿರುವ ಶೈಕ್ಷಣಿಕ ಕಾಳಜಿ ಸರ್ವರಿಗೂ ಮಾದರಿಯಾಗಲೆಂದು ಆಶಿಸಿದರು.

ಕಲೆಗಳನ್ನು ಗೌರವಿಸಿ, ಕಲಾವಿದರನ್ನು ಪೋಷಿಸುವ ಕಾರ್ಯವನ್ನು ಸರ್ವರೂ ಮಾಡಬೇಕು. ಅಂದಾಗ ಮಾತ್ರ ಇಂತಹ ಕಾರ್ಯಕ್ರಮ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ. ಇಂತಹ ಕಾರ್ಯಕ್ರಮಗಳು ನಾಡಿನಾದ್ಯಂತ ಹೆಚ್ಚಾಗಿ ನಡೆಯಲಿ, ಪ್ರತಿಭೆಗಳು ಹೊರಹೊಮ್ಮಲಿ ಎಂದರು. ಇದೇ ವೇಳೆ ಸಾಮಾಜಿಕ, ಸಂಗೀತ, ಶೈಕ್ಷಣಿಕ, ಕೃಷಿ, ವೈದ್ಯಕೀಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ರವಿ ಜಿಂಡ್ರಾಳಿ, ಸತೀಶ್ ಹಟ್ಟಿಹೊಳಿ, ಸುರೇಶ ಜೋರಾಪೂರ, ಈರಣ್ಣಾ ಬಿಸಿರೊಟ್ಟಿ, ದಸ್ತಗೀರ ಬಸ್ಸಾಪೂರೆ, ಗೋವಿಂದ ದಿಕ್ಷಿತ, ಜೋಮಲಿಂಗ ಪಾಟೋಳಿ, ಕಿರಣ ರಜಪೂತ, ಮುಖ್ಯ ಸಂಘಟಕ ರಿಯಾಜ್ ಚೌಗಲಾ ಸೇರಿದಂತೆ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಸಾರ್ವಜನಿಕರು ಇದ್ದರು. ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net