

ಮಂಡ್ಯ: ಮಾನವೀಯತೆಯ ಗುಣ ಮರೆತು ಹೋಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೆಡ್‌ಕ್ರಾಸ್ ಮೂಲಕ ಸೇವಾ ಚಟುವಟಿಕೆಗಳನ್ನು ಮಾಡಿದರೆ ಒಳ್ಳೆಯ ಮನೋಭಾವ ಬೆಳೆಯುತ್ತವೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜಿನೀವಾ ಒಪ್ಪಂದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳು ಯಾವುದೇ ದೇಶ, ಜಾತಿ, ಪಂಗಡವನ್ನು ಅವಲಂಬಿಸಿಲ್ಲ. ಯುದ್ಧದ ಗಾಯಾಳು ಹಾಗೂ ಕೈದಿಗಳನ್ನು ಮಾನವೀಯತೆಯ ತಳಹದಿಯ ಮೇಲೆ ಅವರನ್ನು ಕಾಪಾಡುವುದು ಎಲ್ಲ ರಾಷ್ಟ್ರಗಳ ಕರ್ತವ್ಯವಾಗಬೇಕು ಎಂಬ ಉದ್ದೇಶವನ್ನು ಜಿನಿವಾ ಒಪ್ಪಂದ ಹೊಂದಿದೆ ಎಂದು ವಿವರಿಸಿದರು.
ರೆಡ್‌ಕ್ರಾಸ್ ಸಂಸ್ಥೆಯನ್ನು ಹೆನ್ರಿ ಡ್ಯೂನಾಂಟ್ ಹುಟ್ಟು ಹಾಕಿದ್ದರು. ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥನೀತಿ, ಸ್ವಯಂಸೇವೆ, ಐಕ್ಯಮತ ಹಾಗೂ ವಿಶ್ವ ವ್ಯಾಪಕತೆ ಮೂಲ ತತ್ವಗಳಾಗಿವೆ. ಯುದ್ಧದ ಸನ್ನಿವೇಶದಲ್ಲಿ ಸೈನಿಕರು ಮತ್ತು ಜನರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಜಿನೀವಾ ಒಪ್ಪಂದದ ಹಲವು ಮಾರ್ಗಸೂಚಿಯನ್ನು ಒಳಗೊಂಡಿದೆ. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರಿಗೆ ಧರ್ಮ, ಬಣ್ಣ, ಲಿಂಗ ಭೇದವಿಲ್ಲದೆ ಚಿಕಿತ್ಸೆ ನೀಡಬೇಕು. ಜನರು ಸೆರೆ ಸಿಕ್ಕರೆ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ ಎಂದು ಹೇಳಿದರು.
ಜಗತ್ತಿನ 165 ದೇಶದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಇದೆ. ಎರಡು ಬಾರಿ ಸಂಸ್ಥೆಗೆ ನೊಬೆಲ್ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲದೆ ದೇಶದ ಎಲ್ಲ ಜಿಲ್ಲೆಗಳಲ್ಲೂ ರಕ್ತದಾನ ಶಿಬಿರ, ಅಂಗವಿಕಲರಿಗೆ ಸಲಕರಣೆಗಳನ್ನು ಕೊಡುವ ಮೂಲಕ ಸೇವಾ ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ಒಂದು ಯೂನಿಟ್ ರಕ್ತದಿಂದ ಮೂರರಿಂದ ನಾಲ್ಕು ಜನರ ಜೀವ ಉಳಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೆ.ಎಂ.ಕವಿತಾ ಜಿನೀವಾ ಒಪ್ಪಂದ ಕುರಿತು ಉಪನ್ಯಾಸ ನೀಡಿದರು. ರೆಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕರಾದ ಮಂಗಲ ಯೋಗೀಶ್, ಕೆ.ಎಸ್.ಜವರೇಗೌಡ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್.ಕೃಷ್ಣೇಗೌಡ, ಪ್ರೊ.ದಾನೇಗೌಡ, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಡಾ.ಎಂ.ಬಿ. ಪ್ರಮೀಳಾ ಇತರರಿದ್ದರು.