

ರಾಯಚೂರು: ಯಾವುದೇ ಒಂದು ಕ್ಷೇತ್ರದ ಮುಖ್ಯಸ್ಥರು ಸರಿಯಾಗಿ ಕೆಲಸ ಮಾಡದಿದ್ದರೆ ಆ ಕ್ಷೇತ್ರಕ್ಕೆ ಮಾತ್ರ ಪೆಟ್ಟು ಬೀಳುತ್ತದೆ. ಆದರೆ ಶಿಕ್ಷಕರು ಸರಿಯಾಗಿ ಕೆಲಸ ಮತ್ತು ಪಾಠ ಮಾಡದಿದ್ದರೆ ಒಂದು ಪೀಳಿಗೆಯೇ ಹಾಳಾಗುತ್ತದೆ ಎಂದು ಹೈಕೋರ್ಟ್ ನ್ಯಾಯಾೀಶ ಇ.ಎಸ್.ಇಂದಿರೇಶ ಹೇಳಿದರು.
ಸ್ಥಳೀಯ ಎಲ್ವಿಡಿ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸಿಎಬಿ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಿ ಶಿಕ್ಷಣ ಸಂಸ್ಕೃತಿ ಚೆನ್ನಾಗಿ ಇರುವ ದೇಶ ಚೆನ್ನಾಗಿರುತ್ತದೆ ಎಂದರು.
ಹಲವು ದೇಶದಲ್ಲಿ ಒಪ್ಪಿತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ಆದರೆ ಭಾರತದಲ್ಲಿ 140 ಕೋಟಿ ಜನರಿಗೆ ಎರಡು ಹೊತ್ತಿನ ಊಟ ಸಿಗುತ್ತಿದೆ. ಅದಕ್ಕೆ ಸಂವಿಧಾನದ ನಿಯಮಗಳನ್ನು ಪಾಲಿಸುವುದರ ಜತೆಗೆ ವೌಲ್ಯಯುತವಾಗಿ ಬದುಕುತ್ತಿರುವುದು ಕಾರಣವಾಗಿದೆ.
ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ಕಷ್ಟಕರವಾಗಿದ್ದ ಸಂದರ್ಭದಲ್ಲಿ ಕಾಲೇಜನ್ನು ಕಟ್ಟಿ ಬೆಳೆಸಿರುವುದು ಶ್ಲಾಘನೀಯವಾಗಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂದರೆ ಆಗುವುದಿಲ್ಲ. ಹೀಗಾಗಿ ಮಠ ಮಾನ್ಯಗಳು ಎಲ್ಲರಿಗೂ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿವೆ ಎಂದು ಎ.ಎಸ್.ಇಂದಿರೇಶ ಹೇಳಿದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಡಾ.ಸಿ.ಬಸವರಾಜ ಮಾತನಾಡಿ, ಯಾವುದೇ ಕ್ಷೇತ್ರ ಮಲೀನ ಹಾಗೂ ಘನತೆ ಕಳೆದುಕೊಂಡರೆ ಸಮಾಜದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಶಿಕ್ಷಣ ಕ್ಷೇತ್ರ ಮಲೀನವಾದರೆ ಸಮಾಜ ಅಧೋಗತಿಯತ್ತ ಸಾಗುತ್ತದೆ.
ಸಂವಿಧಾನ ರಚನೆಯಾಗಿ 75 ವರ್ಷಕ್ಕೆ ಕಾಲಿಡುತ್ತಿದ್ದರೂ ಇಂದಿಗೂ ಸಂವಿಧಾನದ ಆಶಯಗಳು ಜನರಿಗೆ ತಲುಪಿಲ್ಲ. ಅಸ್ಪಷ್ಯತೆ, ಬಡತನ, ನಿರುದ್ಯೋಗ ಇಂದಿಗೂ ಕಾಡುತ್ತಿವೆ. ಸಮಾಜದಲ್ಲಿ ಎಲ್ಲರೂ ತಮ್ಮ ಕರ್ತವ್ಯಗಳನ್ನು ಮಾಡಿದಾಗ ಮಾತ್ರ ಇವೆಲ್ಲವೂ ಸರಿಹೋಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ವಿಜಯಪುರದ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ವೇದಗಳ ಕಾಲದಿಂದಲೂ ನೈತಿಕತೆ ಹೆಸರಿನಲ್ಲಿ ಕಾನೂನು ಕಟ್ಟಲೆಗಳಿದ್ದವು. ಆದರೆ ಅದ್ಯಾವುದನ್ನು ನಾವು ನಮ್ಮ ಮಕ್ಕಳಿಗೆ ಹೇಳುತ್ತಿಲ್ಲ. ಪಠ್ಯದಲ್ಲಿ ಕೇವಲ ಸುಳ್ಳುಗಳನ್ನು ಹೇಳುವ ಮೂಲಕ ಮಕ್ಕಳನ್ನು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ.
ನಾವು ವಿಜ್ಞಾನವನ್ನು ಪಾಶ್ವಾತ್ಯರಿಂದ ಕಲಿಯುವ ಪರಿಸ್ಥಿತಿ ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ. ಪ್ರತಿಭೆಗಳಿಗೆ ಸೂಕ್ತ ಸ್ಥಾನಮಾನ ಸಿಗದ ಕಾರಣ ಪ್ರತಿಭೆಗಳು ಪಲಾಯನವಾಗುತ್ತಿವೆ. ಭಾರತದಲ್ಲಿರುವಂತಹ ನೈತಿಕತೆ ಬೇರಾವ ದೇಶದಲ್ಲಿ ಕಾಣುವುದಿಲ್ಲ. ನಮ್ಮ ಜನರು ಜೀವನ ವೌಲ್ಯಗಳಿಗೆ ಬದ್ಧತೆ ನೀಡುತ್ತಾರೆ ಎಂದು ತಿಳಿಸಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾೀಶ ಮಾರುತಿ ಬಾಗಡೆ, ಇಸ್ರೋ ಹಿರಿಯ ವಿಜ್ಞಾನಿ ಅನುರಾಧಾ ದೇಸಾಯಿ, ಸಂಸ್ಥೆ ಪದಾಕಾರಿಗಳಾದ ಅಂಬಾಪತಿ ಪಾಟೀಲ್, ನಂದಾಪುರ ಶ್ರೀನಿವಾಸ, ಶ್ರೀಕಾಂತರಾವ್, ಪವನಕುಮಾರ ಸುಖಾಣಿ, ಪುರುಷೋತ್ತಮ ಇನ್ನಾಣಿ, ಸುನಿಲ್ ಭಂಡಾರಿ ಉಪಸ್ಥಿತರಿದ್ದರು.