

ವಿಜಯಪುರ : ಒಂದೂವರೆ ವರ್ಷದ ನಂತರ ಸೋಮವಾರ ಆರಂಭಿಸಲಾದ ಪುರಸಭೆ ಮೊದಲ ಸಾಮಾನ್ಯ ಸಭೆಯು ಬಜೆಟ್ ಮೇಲಿನ ವಿಷಯದಲ್ಲಿ ಗೊಂದಲದ ಗೂಡಾಗಿ ಮುಂದೂಡಲ್ಪಟ್ಟಿತು.
ಚುನಾಯಿತ ಸದಸ್ಯರ ಸಭೆ ಕರೆಯದೆ ಬಜೆಟ್ ಮಂಡಿಸಲಾಗಿದೆ. ಬಜೆಟ್ನ ಆಗು&ಹೋಗುಗಳ ಬಗ್ಗೆ ಸದಸ್ಯರ ಗಮನಕ್ಕೆ ತಾರದೆ, ಸಲಹೆ ಸೂಚನೆಗಳನ್ನು ಪಡೆಯದೆ ಆಡಳಿತಾಧಿಕಾರಿಗಳು, ಮುಖ್ಯ ಅಧಿಕಾರಿಗಳು ಬಜೆಟ್ ಮಂಡಿಸಿ ಅನುಮೋದಿಸಿರುವುದು ಖಂಡನೀಯ ಎಂದು ಹನಿಫುಲ್ಲಾ ಪ್ರತಿಭಟಿಸಿದ್ದು, ಇತರ ಸದಸ್ಯರೂ ಧ್ವನಿಯಾದರು. ಬಜೆಟ್ ಮಂಡನೆ ವಿಷಯದಲ್ಲಿ ಸರ್ವ ಸದಸ್ಯರು ವಿಶ್ವಾಸಕ್ಕೆ ಬಾರದ ಕಾರಣ, ಕೂಲಂಕುಷವಾಗಿ ಚರ್ಚಿಸಿ ಮುಂದಿನ ವಾರ ಸಾಮಾನ್ಯ ಸಭೆ ನಡೆಸೋಣ ಎಂದು ಸಭೆ ಆರಂಭವಾದ ಕೆಲ ಕ್ಷಣದಲ್ಲೇ ನೂತನ ಅಧ್ಯೆ ಭವ್ಯಾ ಮಹೇಶ್ ಸಭೆ ಮುಂದೂಡಿದರು.
ಬಜೆಟ್ ವಿಷಯವಾಗಿ ಸಾರ್ವಜನಿಕರ ಸಲಹೆ ಸೂಚನೆಗಾಗಿ ಸಭೆ ಕರೆಯಲಾಗಿದ್ದು ಅದರಲ್ಲಿ ಸದಸ್ಯರು ಭಾಗವಹಿಸಬಹುದಾಗಿತ್ತು. ಬಜೆಟ್ ಅನುಮೋದನೆಯಾಗಿದೆ ಎಂದು ಮುಖ್ಯ ಅಧಿಕಾರಿ ಸಂತೋಷ ಹೇಳಿದರು. ಸದಸ್ಯರಾದ ಬೈರೇಗೌಡ, ನಂದಕುಮಾರ್ ಮಾತನಾಡಿ, ಬಜೆಟ್ ತಿದ್ದುಪಡಿ ಮಾಡಲು ಸಾಕಷ್ಟು ಅವಕಾಶಗಳು ಇದ್ದು ಮೊದಲಿಗೆ ಬಜೆಟ್ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿ ಲೋಪಗಳಿದ್ದಲ್ಲಿ ಅದನ್ನು ತಿದ್ದುಪಡಿ ಮಾಡಿ ಅನುಮೋದಿಸಬೇಕು ಎಂದರು.
ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸದಸ್ಯರ ಗಮನಕ್ಕೆ ತಾರದೆ ಬಜೆಟ್ ಮಂಡನೆ ಮಾಡಿರುವುದು ಸರಿಯಲ್ಲ ಎಂದರು. ಸಿ.ಎಂ.ರಾಮು ಮಾತನಾಡಿ, 13 ಮಂದಿ ಸದಸ್ಯರು ಸಹಿ ಮಾಡಿ ವಿಶೇಷ ಸಭೆ ಕರೆಯಬೇಕೆಂದು ತಿಳಿಸಿದ್ದರೂ ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ ಎಂದರು.
ಸದಸ್ಯರಾದ ಎಂ.ಸತೀಶ್ ಕುಮಾರ್ ಹಾಗೂ ಕೇಶವಪ್ಪ ಅವರು ಸಭೆ ಹೊರಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸಲಹೆ ನೀಡಿದಾಗ, ಎಲ್ಲರೂ ಸಭೆಯಿಂದ ಹೊರ ನಡೆದು ಮಾತುಕತೆ ನಡೆಸಿ ಮುಕ್ತಾಯಗೊಳಿಸಿದರು. ಸದಸ್ಯರಾದ ರಾಜಣ್ಣ, ಶಿಲ್ಪಾ ಅಜಿತ್, ರಾಜೇಶ್ವರಿ ಭಾಸ್ಕರ್, ಸುಷ್ಮಾ ಮಹೇಶ್, ಶ್ರೀರಾಮ, ಮಂಜುಳಾ ಮನಿರಾಜು, ಕವಿತಾ ಮುನಿರಾಜು, ರಾಧಮ್ಮ ಪ್ರಕಾಶ್, ಸಲ್ಮಾ ಖಾನಂ, ರವಿ, ಎಂ.ನಾರಾಯಣಸ್ವಾಮಿ, ವಿಮಲಾ ಬಸವರಾಜು, ಆಯಿಷಾ, ಎಕ್ಬಾಲ್, ಪುರಸಭಾ ಮ್ಯಾನೇಜರ್ ಸತ್ಯನಾರಾಯಣ್, ಅಭಿಯಂತರ ಶೇಖರ್ ಇದ್ದರು.