ಸಾಮಾನ್ಯ ಸಭೆ ವೇಳೆ ಹೇಳದೆ ಹೊರ ನಡೆದ ಪಿಡಿಒ: ಸಿದ್ದಾಪುರ ಗ್ರಾಪಂ ಕಚೇರಿ ಮುಂದೆ ಸದಸ್ಯರ ಪ್ರತಿಭಟನೆ

100222 Siddapura GP Members Protest
ಸಿದ್ದಾಪುರದಲ್ಲಿ ಪಿಡಿಒ ಸಾಯಿನಾಥ್ ನಡೆ ಖಂಡಿಸಿ ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿದರು.
Published on

ಸಿದ್ದಾಪುರ: ಇಲ್ಲಿನ ಗ್ರಾಪಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಿಂದ ಪಿಡಿಒ ಸಾಯಿನಾಥ್ ಏಕಾಏಕಿ ಎದ್ದು ಹೋದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಂಚಾಯಿತಿ ಸದಸ್ಯರು, ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಾರಕ್ಕೂ ಮುನ್ನ ಪ್ರತಿಯೊಬ್ಬರಿಗೂ ಸಾಮಾನ್ಯ ಸಭೆಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಈಗ ಸಭೆ ನಡೆಯುವ ವೇಳೆ ಪಿಡಿಒ ಎದ್ದು ಹೊರನಡೆದರು. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕುಡಿವ ನೀರು, ಸ್ವಚ್ಛತೆ, ಕಟ್ಟಡಗಳು ಸೇರಿ ಅನೇಕ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಗ್ರಾಮಸ್ಥರು ಸಹ ಅನೇಕ ಸಮಸ್ಯೆಗಳ ಬಗ್ಗೆ ಹೇಳಿದ್ದು, ಅವೆಲ್ಲವನ್ನೂ ಚರ್ಚಿಸಬೇಕಿತ್ತು. ಇದವುದಕ್ಕೂ ಮನ್ನಣೆ ನೀಡದೆ ಪಿಡಿಒ ತಮ್ಮದೇ ಹಠ ಸಾಧಿಸುತ್ತಿದ್ದಾರೆ ಎಂದು ದೂರಿದರು.

ಗ್ರಾಮದಲ್ಲಿ ಅನೇಕ ಕಾಮಗಾರಿಗಳು ನಡೆದಿದ್ದು ಜೆಇ ಸುರೇಶ್ ಮುಖ ಈವರೆಗೆ ನೋಡಿಲ್ಲ. ಹೀಗಾದರೆ ಗ್ರಾಮದ ಅಭಿವೃದ್ಧಿ ಯಾಗುತ್ತದೆಯೇ ? ಗ್ರಾಮದಲ್ಲಿ ಅನೇಕರಿಗೆ 11ಬಿ ದೊರೆಯದೆ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಸ್ಥಳಕ್ಕೆ ತಾಪಂ ಇಒ ಕೆ.ವಿ. ಕಾವ್ಯಾರಾಣಿ ಆಗಮಿಸಬೇಕು. ಅವರ ಸಮ್ಮುಖದಲ್ಲಿಯೇ ಎಲ್ಲ ವಿಷಯಗಳು ಚರ್ಚೆಯಾಗಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ಘಟನೆ ಬಿಗಡಾಯಿಸುತ್ತಿದ್ದಂತೆ ಪಿಡಿಒ ಸಭೆ ನಡೆಸಲು ಮುಂದಾದರು. ಆದರೆ, ಯಾವುದೇ ಕಾರಣಕ್ಕೂ ಸದಸ್ಯರು ಒಪ್ಪಲಿಲ್ಲ. ತಾಪಂ ಇಒ ಬಂದ ಬಳಿಕವಷ್ಟೇ ಸಭೆ ನಡೆಯಲಿ ಎಂದು ಪಟ್ಟುಹಿಡಿದರು.

ಸಾಮಾನ್ಯ ಸಭೆಗೆ ಅನೇಕ ಸದಸ್ಯರು ತಡವಾಗಿ ಆಗಮಿಸಿದ್ದಾರೆ. ಸಭೆ ನಡೆಸುವ ವೇಳೆ ತಾಪಂ ಇಒರಿಂದ ದೂರವಾಣಿ ಕರೆ ಬಂದಿದ್ದು, ಸಭೆಗೆ ಹಾಜರಾಗುವಂತೆ ಸೂಚಿಸಿದರು. ಹೀಗಾಗಿ ಕಾರ್ಯದರ್ಶಿಗೆ ಸಭೆ ಜವಾಬ್ದಾರಿ ನೀಡಿ ಹೊರಹೋಗಿದ್ದೇನೆ. ಇದಕ್ಕೆ ಸದಸ್ಯರು ಒಪ್ಪಿಲ್ಲ. ಬಳಿಕ ಸಭೆ ನೆಡೆಸಲು ಕರೆದರೂ, ಯಾರೊಬ್ಬರೂ ಸಹಕರಿಸುತ್ತಿಲ್ಲ.| ಸಾಯಿನಾಥ್, ಸಿದ್ದಾಪುರ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net