ಪೂರ್ಣವಾಗದೆ 'ವಾರಾಹಿ' ಹಸ್ತಾಂತರಿಸಬೇಡಿ

Nagara Lead
Published on

ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ

ಉಡುಪಿ ನಗರಸಭೆಯಲ್ಲಿ ಸಾಮಾನ್ಯ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನೀರು ಪೂರೈಕೆ ವ್ಯವಸ್ಥೆ ಕೆಯುಐಡಿಎಫ್​ಸಿಗೆ ಹಸ್ತಾಂತವಾಗಿದೆ ಎಂದು ನಗರಸಭಾ ಅಧಿಕಾರಿಗಳು ಉಡುಪಿ ನಗರದ ಜನರಿಗೆ ನೀರು ಪೂರೈಕೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ವಾರಾಹಿ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳುವ ಮೊದಲೇ ಅದನ್ನು ನಗರಸಭೆಗೆ ಹಸ್ತಾಂತರಿಸಬಾರದು. ಇನ್ನೂ ಕೆಲವು ಕಾಮಗಾರಿ ಬಾಕಿ ಉಳಿದಿದ್ದು, ಶೇ.100 ಕಾಮಗಾರಿ ಪೂರ್ಣಗೊಂಡ ಬಳಿಕವೇ ಹಸ್ತಾಂತರಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸೂಚಿಸಿದರು.

ಉಡುಪಿ ನಗರಸಭೆಯ ಸಭಾಭವನದಲ್ಲಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ (ಅ.28) ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಚೌತಿ ಹಬ್ಬದಿಂದ ಆರಂಭಿಸಿ ದೀಪಾವಳಿ ಹಬ್ಬದ ಸಂದರ್ಭದಲ್ಲೂ ಸಹ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗಿದೆ ಎಂದರು.

ಅಧಿಕಾರಿಗಳಲ್ಲಿಲ್ಲ ಸಮನ್ವಯತೆ

Nagara 2
ವಾರಾಹಿ ಯೋಜನೆ ಕುರಿತು ಪ್ರತಿಪಕ್ಷ ನಾಯಕ ರಮೇಶ್​ ಕಾಂಚನ್​ ಮಾತನಾಡಿ, ನಗರಸಭೆ ಹಾಗೂ ವಾರಾಹಿ ಯೋಜನೆಯ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದೆ. ಕೆಯುಡಿಎಫ್​ಸಿ ಠೇವಣಿ ಇಡಲಿ. ಟ್ಯಾಂಕರ್​ ಮೂಲಕವಾದರೂ ಜನರಿಗೆ ನೀರು ಪೂರೈಸಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಶ್​ಪಾಲ್​, ವಾರಾಹಿ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ವರ್ಷ ಬೇಕಾಗಬಹುದು. ಹೀಗಾಗಿ ಜನರಿಗೆ ಬಜೆ ಅಣೆಕಟ್ಟು ಮೂಲಕವೇ ವ್ಯವಸ್ಥಿತವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆಯಿಂದ ನಿರ್ವಹಣೆ ಕ್ರಮ

ವಿಜಯಲಕ್ಷ್ಮೀ ಮಾತನಾಡಿ, ವಾರಾಹಿ ನೀರು ಪೂರೈಕೆಯ ಒತ್ತಡಕ್ಕೆ ಪೈಪ್​ ಒಡೆಯುತ್ತಿದೆ. ನಗರವಾಸಿಗರಿಗೆ ಕೊಳವೆಬಾವಿ ನೀರೂ ಬೇಕು ಎಂದರು. ನಗರಸಭೆಯ ಎಇಇ ದುರ್ಗಾಪ್ರಸಾದ್​ ಪ್ರತಿಕ್ರಿಯಿಸಿ, ವಾರಾಹಿ ಅಥವಾ ಬಜೆ ಡ್ಯಾಮ್​ನಲ್ಲಿ ನೀರಿಲ್ಲದಿದ್ದರೆ ಕೆಯುಡಿಎಫ್​ಸಿ ಕೊಳವೆ ಬಾವಿಯಿಂದ ನೀರು ಕೊಡಲು ಅವಕಾಶವಿದೆ ಎಂದರು. ಪೌರಾಯುಕ್ತ ಮಹಾಂತೇಶ ಹಂಗರಗಿ ಮಾತನಾಡಿ, ಈ ವಿಚಾರವಾಗಿ ಕೆಯುಡಿಎಫ್​ಸಿ ಮುಖ್ಯ ಇಂಜಿನಿಯರ್​ ಜತೆ ಮಾತನಾಡುತ್ತೇನೆ. ನಗರಸಭೆ ವತಿಯಿಂದಲೇ ಬಜೆ ಡ್ಯಾಂ ನೀರು ಪೂರೈಕೆ ನಿರ್ವಹಣೆ ಮಾಡುವ ಅವಕಾಶದ ಕುರಿತು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ದೀಪಾವಳಿಗೂ ನೀರಿಲ್ಲ

ಸುಮಿತ್ರಾ ಆರ್​. ನಾಯಕ ಮಾತನಾಡಿ, ಡಾ. ಅಂಬೇಡ್ಕರ್​ ನಗರ ವಸತಿ ನಿಗಮದಿಂದ 2021, 22ರ ಗುರಿಯಂತೆ ಕಾರ್ಯಯೋಜನೆ ಆಗದ್ದರಿಂದ ಪ್ರಧಾನ ಮಂತ್ರಿ ಆವಾಜ್​ ಯೋಜನೆ ಜಾರಿಯೂ ಸಾಧ್ಯವಾಗಿಲ್ಲ ಎಂದರು. ಚೌತಿ, ದೀಪಾವಳಿಗೂ ಸಹ ಹಲವು ವಾರ್ಡ್​ಗಳಿಗೆ ನೀರು ಬಂದಿಲ್ಲ. ಕೊಳವೆಬಾವಿ ದುರಸ್ತಿಯೂ ಆಗಿಲ್ಲ. ನಗರಸಭೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ವಿವಿಧ ವಿಷಯ ಚರ್ಚೆ

ಮಲ್ಪೆ ಬೀಚ್​ ಬಳಿ ಸಂಜೆ 6 ಗಂಟೆ ಬಳಿಕ ಶೌಚಾಲಯಕ್ಕೆ ಬೀಗ ಹಾಕುತ್ತಿದ್ದು, ಯಾತ್ರಿಕರಿಗೆ ಸಮಸ್ಯೆ ಆಗುತ್ತಿದೆ ಎಂದು ರಮೇಶ್​ ಕಾಂಚನ್​ ತಿಳಿಸಿದರು. ಅಮೃತಾ ಕೃಷ್ಣಮೂರ್ತಿ ಮಾತನಾಡಿ, ಡಿವೈಡರ್​ಗಳಲ್ಲಿ ಅಳವಡಿಸಿರುವ ಬೀದಿ ದೀಪ ಸರಿಯಾಗಿ ಬೆಳಗುತ್ತಿಲ್ಲ. ಈ ಕುರಿತು ಹಲವು ಬಾರಿ ತಿಳಿಸಿದರೂ ಸಮಸ್ಯೆ ಪರಿಹರಿಸಲು ಯಾರೂ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೀದಿ ನಾಯಿಗಳಿಂದ ಸಮಸ್ಯೆ, ಅವುಗಳಿಗೆ ಆಹಾರ ಹಾಕಲು ಸ್ಥಳ ನಿಗದಿ, ಸಂತಾನಹರಣದ ಕುರಿತು ಕೆಲ ಕಾಲ ಚರ್ಚೆ ನಡೆಯಿತು.

ಮಧ್ಯಪ್ರದೇಶದ ಇಂದೋರ್​ಗೆ ತೆರಳಿದ್ದ ಉಡುಪಿ ನಗರಸಭೆಯ ನಿಯೋಗದ ಪ್ರವಾಸದ ಅನುಭವವನ್ನು ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್​ ಉಪಸ್ಥಿತರಿದ್ದರು.

ಚರಂಡಿಗೆ ಕೊಳಚೆ ನೀರು ಬಿಡುವ ಜನ

Nagara BOX
ನಗರಭಾಗದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬನ್ನಂಜೆ, ಶಿರಿಬೀಡು ಭಾಗಗಳಲ್ಲಿ ಮಳೆ ನೀರು ಹರಿಯಲೆಂದು ಮಾಡಿರುವ ಚರಂಡಿ (ತೋಡು)ಯಲ್ಲಿ ಕೊಳಚೆ ನೀರು ನಿರಂತರವಾಗಿ ಹರಿಯುತ್ತಿದೆ. ಆ ಪ್ರದೇಶದಲ್ಲಿ ಗಬ್ಬು ವಾಸನೆಯಿಂದ ನಿವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸುರೇಶ್​ ಶೆಟ್ಟಿ ಬನ್ನಂಜೆ ಗಮನಕ್ಕೆ ತಂದರು. ಇದೇ ವಿಚಾರವಾಗಿ ಮಂಜುಳಾ ನಾಯಕ್​ ಹಾಗೂ ಜಯಂತಿ ಪೂಜಾರಿ ಮಾತನಾಡಿ, ಕೆಲ ವಸತಿ ಸಂಕೀರ್ಣಗಳ ಕೊಳಚೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಪ್ರತಿದಿನ ಸಂಜೆ ಅಥವಾ ರಾತ್ರಿಯ ಬಳಿಕ ತೋಡಿಗೆ ಪಂಪ್​ ಮಾಡುವ ಮೂಲಕ ಮನೆಗಳ ಕೊಳಚೆ ನೀರು ಬಿಡುತ್ತಿದ್ದಾರೆ ಎಂದರು.

ನಗರದ 35 ವಾರ್ಡ್​ಗಳ ರಸ್ಯೆಗಳಲ್ಲಿ ಹೊಂಡ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ರಸ್ತೆಗಳ ತೇಪೆ ಕಾಮಗಾರಿಗೆ ನಗರಸಭೆ ವತಿಯಿಂದ 2.5 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ನಿತ್ಯವೂ ಮಳೆ ಬರುತ್ತಿರುವುದರಿಂದ ಕಾಮಗಾರಿಗೆ ತೊಂದರೆ ಆಗಿದೆ. ನ.10ರ ಬಳಿಕ ರಸ್ತೆ ರಿಪೇರಿ ಕೆಲಸ ಆರಂಭಿಸಿ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net