ನೆಲಮಂಗಲಕ್ಕೆ ಶೀಘ್ರ ಕಾವೇರಿ ನೀರು

General meeting of all members
General meeting of all nelamangala muncipal members
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರಸಭೆ ವ್ಯಾಪ್ತಿಗೆ ಒಳಚರಂಡಿ ಯೋಜನೆ ಜತೆಗೆ ಕಾವೇರಿ ನೀರು ತಂದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ನಗರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ಲಭ್ಯವಿರುವ ನೀರು ಕುಡಿಯಲು ಯೋಗ್ಯವಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಶಾಸಕರ ಅನುದಾನದಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸುವುದು, ಸ್ಥಳಾವಕಾಶ ಒದಗಿಸಿಕೊಟ್ಟಲ್ಲಿ ವ್ಯಾಪಾರಿಗಳಿಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ, ನೆಲಮಂಗಲ ನಗರ ಮತ್ತು ಭಿನ್ನಮಂಗಲ ಗ್ರಾಮದ ಕೆರೆ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸುತ್ತಿದ್ದು, ಮೊದಲ ಹಂತದಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ನಗರದ ಕೆರೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಪ್ರತಿ ವಾರ್ಡ್‌ಗೂ ಭೇಟಿ: ನಗರಸಭೆ ವಿಲೀನಗೊಂಡಿರುವ ಪ್ರದೇಶಗಳ ಅಭಿವೃದ್ಧಿ ಮಾಡುವುದು, ಆರ್ಥಿಕ ಹೊರೆಯಾಗದಂತೆ ಘನತ್ಯಾಜ್ಯ ನಿರ್ವಹಣೆ, ಉದ್ಯಾನವನಗಳ ಅಭಿವೃದ್ಧಿ ಸೇರಿ ನಗರಸಭೆ ಸಮಗ್ರ ಅಭಿವೃದ್ಧಿ ಕುರಿತಾಗಿ ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸುವ ಜತೆಗೆ ಪ್ರತಿ ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡುವುದಾಗಿ ಶಾಸಕರು ತಿಳಿಸಿದರು.
ಸ್ಥಾಯಿಸಮಿತಿ ರಚನೆ, ಅಧ್ಯಕ್ಷರ ಆಯ್ಕೆ : ಸಾಮಾನ್ಯಸಭೆಯಲ್ಲಿ ಸಿ.ಪ್ರದೀಪ್, ಸುನೀಲ್‌ಮೂಡ್, ಎನ್.ಗಣೇಶ್, ಶಾರದಾ ಉಮೇಶ್, ಲೋಲಾಕ್ಷಿಗಂಗಾಧರ್, ಅಂಜನಾಮೂರ್ತಿ, ಸುಧಾಕೃಷ್ಣಪ್ಪ, ಚೇತನ್ ಆಂಜಿನಮೂರ್ತಿ ಒಳಗೊಂಡಂತೆ ಸ್ಥಾಯಿಸಮಿತಿ ರಚಿಸಿ, ನೂತನ ಅಧ್ಯಕ್ಷರಾಗಿ ಸಿ.ಪ್ರದೀಪ್ ಅವರನ್ನು ಸರ್ವಸದಸ್ಯರು ಆಯ್ಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net