ಸಭೆ ಸಾಮಾನ್ಯ, ಆಕ್ರೋಶ ಅಸಾಮಾನ್ಯ...

Meeting Lead
Published on

ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗರಂ

ಸದಸ್ಯರ ಆರೋಪ-ಪ್ರತ್ಯಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮರ್ಪಕವಾಗಿ ಚರಂಡಿ-ತೋಡುಗಳಲ್ಲಿನ ಹೂಳು ತೆರವು ಹಾಗೂ ಬೀದಿ ದೀಪಗಳ ನಿರ್ವಹಣೆ, ನಗರದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ತೆರವು, ಸರ್ಕಾರದ ಗ್ಯಾರಂಟಿ ಯೋಜನೆಗಳ ಚರ್ಚೆ, ಉಡುಪಿಯ ಮುಂದಿನ ಪರ್ಯಾಯಕ್ಕೆ ಅನುದಾನ ಮೀಸಲು ಈ ಪ್ರಮುಖ ನಾಲ್ಕು ವಿಷಯಗಳಿಗೆ ಸಂಬಂಧಿಸಿ ಉಡುಪಿಯ ನಗರಸಭೆಯಲ್ಲಿ ಮೇ 27ರಂದು ಬೆಳಗ್ಗೆ ಸಾಮಾನ್ಯ ಸಭೆ ನಡೆಯಿತು.

Meeting 2
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸದಸ್ಯರು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಕಳೆದ ಸೋಮವಾರ ಕೃತಕ ನೆರೆ ಉಂಟಾಗಲು ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು.

ತೋಡು, ಚರಂಡಿ ತೊಡಕು

Meeting 4
ಚರಂಡಿ, ತೋಡುಗಳ ಹೂಳು ತೆರವು ಕಾರ್ಯದಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ಧೋರಣೆ ಖಂಡಿಸಿ ಸದಸ್ಯ ವಿಜಯ ಕೊಡವೂರು ಮಾತನಾಡಿ, ಹೂಳೆತ್ತಲು ಈಗ ಟೆಂಡರ್​ ಕರೆದಿರುವುದು ಎಷ್ಟಿ ಸರಿ? ರಸ್ತೆಗಳ ಡಾಂಬರೀಕರಣವನ್ನೂ ಮಾಡಿಲ್ಲ ಎಂದು ಪ್ರಸ್ತಾಪಿಸಿದರು. ಈ ವಿಚಾರಕ್ಕೆ ಧ್ವನಿ ಸೇರಿಸಿದ ಮಾನಸಿ ಪೈ, ಮಳೆನೀರು ಹರಿಯುವ ತೋಡಲ್ಲೇ ಕೆಲವರು ಕಟ್ಟಡ ಕಟ್ಟಿದ್ದಾರೆ. ಅದರಿಂದ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದರು.

ಅರಣ್ಯ ಇಲಾಖೆ ನಿರ್ಲಕ್ಷ್ಯ

Meeting 2
ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ನನ್ನ ವಾರ್ಡ್​ನಲ್ಲಿ ಮಳೆಯಿಂದಾಗಿ ರಾತ್ರಿ ವೇಳೆ ಮರ ಬಿದ್ದು 12 ವಿದ್ಯುತ್​ ಕಂಬಕ್ಕೆ ಹಾನಿಯಾಗಿದೆ. ವಿದ್ಯುತ್​ ತಂತಿಗಳಿಗೆ ತಾಗಿರುವ ಮರದ ಟೊಂಗೆ, ಅಪಾಯಕಾರಿ ಮರ ತೆರವು ಮಾಡುವಂತೆ ಆರು ತಿಂಗಳಿಂದ ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಇದ್ದೇನೆ. ಆದರೂ ಕ್ರಮ ಕೈಗೊಂಡಿಲ್ಲ. ಆಗಿರುವ ಅನಾಹುತಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಹೊಣೆ. ಇನ್ನಾದರೂ ಅಪಾಯಕಾರಿ ಮರಗಳನ್ನೂ ತೆರವು ಮಾಡಿ ಎಂದರು.

ಸಂತ್ರಸ್ತರಿಗೆ ಪರಿಹಾರ

Meeting 5
ಪೌರ ಕಾರ್ಮಿಕರ ಕೊರತೆಯಿಂದಾಗಿ ನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೂ ತೊಡಕಾಗುತ್ತಿದೆ. ಸೂಕ್ತವಾಗಿ ಕಸ ವಿಲೇವಾರಿ ಆಗುತ್ತಿಲ್ಲವೆಂದು ಜನರು ದೂರು ನೀಡುತ್ತಿದ್ದಾರೆ. ನಿಟ್ಟೂರಲ್ಲಿ ಹೆದ್ದಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟಿಟ್ದದು ತೆರವಿಗೆ ನೇರ ಕಾರ್ಯಾಚರಣೆ ಮಾಡಬೇಕು. ಅಲ್ಲದೆ, ನಿಟ್ಟೂರಿನ ಎಸ್​ಟಿಪಿ ದುರಸ್ತಿ ಮಾಡದ್ದರಿಂದ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದು ಕೂಡಲೇ ರಿಪೇರಿ ಮಾಡಬೇಕು. ಕರಾವಳಿ ಬೈಪಾಸ್​ನಿಂದ ಮಲ್ಪೆಗೆ ತೆರಳುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಇನ್ನಷ್ಟು ಹೊಂಡ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ವಾರಾಹಿ ಕುಡಿಯುವ ನೀರು ಕಾಮಗಾರಿ ಇನ್ನೂ ಅಂತ್ಯಕಂಡಿಲ್ಲ. ಇನ್ನೂ ಪ್ರಯೋಗದಲ್ಲೇ ಕಾಲಹರಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಮಳೆಯಿಂದಾಗಿ ಹಾನಿ ಅನುಭವಿಸಿದ ಸಂತ್ರಸ್ತರಿಗೆ ಪೂರಕ ಪರಿಹಾರವನ್ನು ಕೂಡಲೇ ವಿತರಿಸಬೇಕೆಂದು ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರಜಿನಿ ಹೆಬ್ಬಾರ, ಪೌರಾಯುಕ್ತ ಜೆ.ಮಹೇಶ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂಥ ಅಧಿಕಾರಿಗಳು ಅಗತ್ಯವಿಲ್ಲ

Meeting 3
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅವರೂ ಸಹ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೂ, ಅಕ್ರಮ ಕಟ್ಟಡ ನಿರ್ಮಿಸಿದ್ದರೂ ತೆರವಿಗೆ ಯಾವುದೇ ಕ್ರಮವಹಿಸುತ್ತಿಲ್ಲ. ಯಾವುದೇ ಮುತುವರ್ಜಿಯೂ ಇಲ್ಲ. ಇಂಥ ಅಧಿಕಾರಿಗಳು ನಮ್ಮ ನಗರಸಭೆಗೆ ಅಗತ್ಯವಿಲ್ಲ ಎಂದರು. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಜೆ. ಕಲ್ಮಾಡಿ, ಶಾಸಕರು ಈ ಹಿಂದೆ ಸಭೆಯಲ್ಲಿ ಸೂಚಿಸಿದ ಮಾತುಗಳಿಗೆ ಬೆಲೆಯೇ ಇಲ್ಲವೇ? ತೋಡು ಹೂಳು ತೆಗೆಯಲು ಇನ್ನೂ ಯಾಕೆ ಅಂದಾಜು ಪಟ್ಟಿ ತಯಾರಿಸಿಲ್ಲ ಎಂದು ಪ್ರಶ್ನಿಸಿದರು. ಶ್ರೀಕೃಷ್ಣ ರಾವ್​ ಕೊಡಂಚ ಮಾತನಾಡಿ, ರಾಜಕಾಲುವೆಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರದ ವಿವಿಧೆಡೆ ಇರುವ ಇನ್ನಷ್ಟು ಅಕ್ರಮ ಕಟ್ಟಡಗಳ ವಿಚಾರವಾಗಿ ಸದಸ್ಯರಾದ ಸವಿತಾ ಹರೀಶರಾಮ್​, ಸುರೇಶ ಶೆಟ್ಟಿ ಬನ್ನಂಜೆ ಮಾತನಾಡಿದರು.

ಗ್ಯಾರಂಟಿ ಬೇಡವೆಂದು ಬರೆದುಕೊಡಿ

Meeting BOX
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಕುರಿತಾಗಿಯೂ ಸಭೆಯಲ್ಲಿ ಪರ-ವಿರೋಧ ಚರ್ಚೆ ನಡೆಯಿತು. ಯೋಜನೆ ವಿರೋಧಿಸಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯರನ್ನು ಪ್ರತಿಪಕ್ಷ ನಾಯಕ ರಮೇಶ ಕಾಂಚನ್​ ತರಾಟೆಗೆ ತೆಗೆದುಕೊಂಡರು. ನಮಗೆ ಗ್ಯಾರಂಟಿ ಯೋಜನೆ ಬೇಡವೆಂದು ಬರೆದುಕೊಡಿ ಎಂದು ಸಲಹೆ ನೀಡಿದರು. ಇದಕ್ಕೆ ಸುಮಿತ್ರಾ ನಾಯಕ ಪ್ರತಿಕ್ರಿಯಿಸಿ, ಸರ್ಕಾರವೇ ಗ್ಯಾರಂಟಿ ಕೊಟ್ಟಿದ್ದು. ಜನರು ಕೇಳಿಲ್ಲ ಎಂದರು. 35 ವಾರ್ಡ್​ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿಲ್ಲ. ಸಾಮೂಹಿಕ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ರಮೇಶ ಕಾಂಚನ್​ ಸವಾಲು ಹಾಕಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವೆ ಸರಿಯಾಗಿ ಜಿಲ್ಲೆಗೆ ಬರುತ್ತಿಲ್ಲ. ಅಭಿವೃದ್ಧಿ ಕುರಿತು ಚರ್ಚಿಸುತ್ತಿಲ್ಲ ಎಂದು ದೂರಿದರು. ವಿಧಾನಸಭೆಯಲ್ಲಿ 18 ಶಾಸಕರ ಅಮಾನತು ಮಾಡಿದಂತೆ ಇಲ್ಲಿಯೂ ಅಧ್ಯಕ್ಷರ ಮಾತು ಕೇಳದ, ಗೌರವ ಕೊಡದ ಸದಸ್ಯರನ್ನು ಅಮಾನತು ಮಾಡಬೇಕೆಂಬ ರಮೇಶ ಕಾಂಚನ್​ ಹೇಳಿಕೆಗೆ ಗಿರೀಶ ಅಂಚನ್​ ನಡುವೆ ಸವಾಲು-ಪ್ರತಿಸವಾಲು ನಡೆಯಿತು.

ಪರ್ಯಾಯಕ್ಕೆ ವಿಶೇಷ ಅನುದಾನ

ಉಡುಪಿ ಶ್ರೀಕೃಷ್ಣ ಮಠದ 2026ರ ಜ.18ರಿಂದ ಆರಂಭಗೊಳ್ಳುವ ಇನ್ನೊಂದು ಮಠದ ಪರ್ಯಾಯಕ್ಕೆ 25 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಹಾಗೂ ನಗರಸಭೆಯಿಂದ 50 ಲಕ್ಷ ರೂ. ಅನುದಾನ ಮೀಸಲು ಇಡಲು ನಿರ್ಣಯ ಮಂಡಿಸಲಾಯಿತು.

ನಗರದಲ್ಲಿ ಈಬಾರಿ ತಲೆದೋರಿದ ಕೃತಕ ನೆರೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಚರಂಡಿ, ತೋಡುಗಳ ಅತಿಕ್ರಮಣ ಕೂಡಲೇ ತೆರವುಗೊಳಿಸಿ. ಕಟ್ಟಡಕ್ಕೆ ಡೋರ್​ ನಂಬರ್​, ವಾಸ್ತವ್ಯ ಪ್ರಮಾಣಪತ್ರ ಕೊಡುವಾಗ ಅದು ಸರಿ ಇದೆಯೋ ಅಥವಾ ಅತಿಕ್ರಮಣವೋ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಬೇಕು. | ಯಶ್​ಪಾಲ್​ ಸುವರ್ಣ. ಶಾಸಕ ನಗರಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಸ್ಥಾಯಿ ಸಮಿತಿಯಲ್ಲಿಯೂ ಕಡೆಗಣನೆ ಮಾಡಲಾಗುತ್ತಿದೆ. ಪ್ರತಿಪಕ್ಷಗಳ ಸದಸ್ಯರಿರುವ ವಾರ್ಡ್​ಗಳ ಅಭಿವೃದ್ಧಿ ವಿಚಾರದಲ್ಲಿ, ಅನುದಾನ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. | ರಮೇಶ ಕಾಂಚನ್​. ಪ್ರತಿಪಕ್ಷ ನಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net