

ಮಡಿಕೇರಿ: ಜನರಲ್ ಕೆ.ಎಸ್.ತಿಮ್ಮಯ್ಯನವರ ೧೧೯ನೇ ಜನ್ಮ ದಿನಾಚರಣೆಯನ್ನು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮ ಪ್ರಯುಕ್ತ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ಅವರ ಪ್ರತಿಮೆಗೆ ಗಣ್ಯರು, ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂಧ ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ವಿದ್ಯಾರ್ಥಿಗಳು ಪಥಸಂಚನದ ಮೂಲಕ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.
ನಂತರ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೊಡವ ಸಮಾಜ ಮತ್ತು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಡುವಂಡ ಮುತ್ತಪ್ಪ ವಹಿಸಿದ್ದರು.
ಈ ಸಂದರ್ಭ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಬಿ.ಎಂ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಪ್ರೇರಣಾ ಶಕ್ತಿಯಾಗಿ ಬೆಳೆಯಬೇಕು. ಜನರಲ್ ತಿಮ್ಮಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಕಿವಿ ಮಾತನ್ನು ಹೇಳಿದರು.
ಶಾಲಾ ಚಟುವಟಿಕೆಯಲ್ಲಿ ಪಾಲ್ಕೊಂಡು ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾಗಿ ಯುಕ್ತಾ ನೀಲಮ್ಮ, ಮಾಸ್ಟರ್ ಧ್ರುವ ನಂಜಪ್ಪ, ಕುಮಾರಿ ಜನೀಷಾ ಸುಬ್ರಮಣಿ ಹೊರಹೊಮ್ಮಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಕೇಕಡ ದೇವಯ್ಯ, ಆಡಳಿತ ಅಧಿಕಾರಿ ಎನ್.ಎ.ಪೊನ್ನಮ್ಮ, ಸಂಚಾಲಕ ಕನ್ನಂಡ ಕವಿತಾ ಬೊಳ್ಳಪ್ಪ, ಪ್ರಾಂಶುಪಾಲೆ ಎಂ.ಜಿ.ಸವಿತಾ, ಆಡಳಿತ ಮಂಡಳಿ ಇತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.