ಎಫ್ ಡಿಐ ಹೆಚ್ಚಳಕ್ಕೆ ಭಾರಿ ವಿರೋಧ, ಹುಬ್ಬಳ್ಳಿಯಲ್ಲಿ ಜನರಲ್ ಇನ್ಸುರನ್ಸ್ ನೌಕರರ ಮಹಾಸಭೆ

IMG_20250411_111250_784.jpg
Published on

ಹುಬ್ಬಳ್ಳಿ: ಅಖಿಲ ಭಾರತೀಯ ಜನರಲ್ ಇನ್ಸುರನ್ಸ್ ನೌಕರರ ದಕ್ಷಿಣ ವಲಯ ಆಡಳಿತ ಮಂಡಳಿ ಮಹಾಸಭೆಯು ನಗರದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿದ್ದು, ಮಹತ್ವದ ವಿಷಯಗಳ ಬಗ್ಗೆ ಚರ್ಚೆಗಳಾಗಲಿವೆ ಎಂದು ಸಂಘಟನೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎ. ಕುಮಾರವೇಲು ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 11 ಹಾಗೂ 12ರಂದು ನಡೆಯುವ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ ನಡೆದು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾರ್ವಜನಿಕ ವಲಯದ ಜನರಲ್ ಇನ್ಸುರನ್ಸ್ ಕಂಪನಿಗಳು ಹಲವು ಆರ್ಥಿಕ ಸಮಸ್ಯೆಗಳು ಹಾಗೂ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿವೆ. ಇವುಗಳ ಭವಿಷ್ಯವೇ ಡೋಲಾಯಮಾನವಾಗಿದೆ. ವಿದೇಶಿ ನೇರ ಬಂಡವಾಳ (ಎಫ್ ಡಿಐ) ಹೂಡಿಕೆಯನ್ನು ಈಗಿರುವ ಶೇ. 74ನ್ನು ಶೇ. 100ಕ್ಕೆ ಹೆಚ್ಚಿಸಲು ಮುಂದಾಗಿರುವುದು ಬಹಳ ದೊಡ್ಡ ಆತಂಕ ತಂದೊಡ್ಡಿದೆ ಎಂದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇನ್ಸುರನ್ಸ್ ಕಂಪನಿಗಳ ಹಿತ ಕಾಯುವ ಸಲುವಾಗಿ ಇದರ ಪಾಲುದಾರರು, ನೀತಿ ನಿರೂಪಕರು, ಉದ್ಯಮ ಪರಿಣಿತರ ಸಭೆ ಆಯೋಜನೆ ಮಾಡಲಾಗಿದೆ. ಈ ಕುರಿತು ಶ್ರೀ ಒಂದು ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಕಡಿಮೆ ಮಾಡಬೇಕು, ಸಾರ್ವಜನಿಕ ವಲಯದ ಜನರಲ್ ಇನ್ಸುರನ್ಸ್ ಕಂಪನಿಗಳನ್ನು ಒಂದೇ ವೇದಿಕೆಗೆ ತಂದು ಅವುಗಳನ್ನು ಬಲಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಸಂಘಟನೆಯ ಆರ್. ಶ್ರೀನಿವಾಸಮೂರ್ತಿ, ಸತೀಶ ಜಿಂದಾಲ್, ಎಸ್. ಸಾವರಿಮುತ್ತು, ಆರ್. ಸುಂದರರಾಜ್, ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net