

ಪುರುಷೋತ್ತಮ ಪೆರ್ಲ ಕಾಸರಗೋಡು ನಗರದಲ್ಲಿ ಕಾರ್ಯಾಚರಿಸುತ್ತಿರುವ ಜನರಲ್ ಆಸ್ಪತ್ರೆ ಇನ್ನು ಮುಂದೆ ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೇರಲಿದೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಪ್ರಕಟಣೆ ಇನ್ನಷ್ಟೆ ಹೊರಬರಬೇಕಾಗಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಜನರಲ್ ಆಸ್ಪತ್ರೆಯಾಗಿ ಕಾರ್ಯಾಚರಿಸಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಜನರಲ್ ಆಸ್ಪತ್ರೆಯಲ್ಲಿ ಪ್ರಸಕ್ತ ಇರುವ ಸೌಲಭ್ಯಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ಭಾಗವಾಗಿ ಮುನ್ನಡೆಸಿಕೊಂಡು ಹೋಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸ್ಪತ್ರೆಯ ಆರೋಗ್ಯಸೇವಾ ನಿರ್ದೇಶಕ(ಹೆಲ್ತ್ ಸರ್ವೀಸ್ ಡೈರೆಕ್ಟರ್)ರಿಂದ ಆರಂಭಗೊಂಡು ಎಲ್ಲ ವೈದ್ಯರೂ ಇನ್ನು ಈ ಆಸ್ಪತ್ರೆಯಲ್ಲಿ ಡೆಪ್ಯುಟೇಶನ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈಗಾಗಲೇ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ 220 ಹಾಸಿಗೆಗಳ ಸುಸಜ್ಜಿತ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲು ಇನ್ನೂ ಕಾಲಾವಕಾಶ ತಗಲುವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸುವ ಗುರಿಯಿರಿಸಲಾಗಿದೆ. ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗೆ ಮೂರು ವರ್ಷಗಳ ಸೇವಾ ಅನುಭವ ಹೊಂದಿದ್ದಲ್ಲಿ ಮಾತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಗಲಿದೆ. ಉಕ್ಕಿನಡ್ಕದ ವೈದ್ಯಕೀಯ ಕಾಲೆಜು ಆಸ್ಪತ್ರೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಮಾನದಂಡ ಪ್ರಕಾರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನಿಡುವ ರೀತಿಯಲ್ಲಿ ಆಸ್ಪತ್ರೆ ಎದ್ದು ನಿಲ್ಲಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕಾಗಿಬರಲಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಗೊಳ್ಳಬೇಕಾದರೆ ಮತ್ತೆ ಮೂರು ವರ್ಷ ಕಾಲ ಕಾಯಬೇಕು. ಈ ವಿಳಂಬ ತಪ್ಪಿಸಲು ಸರ್ಕಾರ ಕಾಸರಗೊಡು ಜನರಲ್ ಆಸ್ಪತ್ರೆಯನ್ನು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಭಾಗವಾಗಿ ಮುಂದುವರಿಸಿದ ನಂತರ ಉಕ್ಕಿನಡ್ಕದ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಅಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನಿಸಿದೆ. ನಿರ್ಲಕ್ಷಿಸಿದರೆ ಎರಡೂ ಯೋಜನೆ ವ್ಯರ್ಥ? ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ 2013ರಲ್ಲಿ ಆರಂಭಿಸಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಮೂರು ವರ್ಷ ಕಾಲಾವಧಿಯಲ್ಲಿ ಪೂರ್ತಿಗೊಳ್ಳಬೇಕಿತ್ತು. 11ವರ್ಷ ದಾಟಿದರೂ ಕಾಮಗಾರಿ ಪೂರ್ತಿಗೊಳಿಸಲಾಗದಿರುವ ಬಗ್ಗೆ ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಮಧ್ಯೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಅಸ್ಪತ್ರೆ ಅರಂಭಿಸುವ ಸರ್ಕಾರದ ಧ್ಯೇಯೋದ್ದೇಶ ಉತ್ತಮವಾಗಿದ್ದರೂ, ವೈದ್ಯಕೀಯ ಕಾಲೇಜಿಗೆ ವೈದ್ಯರ ನೇಮಕಾತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಮೀನಮೇಷ ಎಣಿಸಿದರೆ, ಎರಡೂ ಯೋಜನೆಗಳು ವ್ಯರ್ಥವಾಗುವ ಸಾಧ್ಯತೆ ಇದೆ. ಎಂಡೋಸಲ್ಫಾನ್ ಸಂತ್ರಸ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಪಂಚಾಯಿತಿಗೆ ಅತ್ಯಂತ ಸನಿಹದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲೆಯೆತ್ತುತ್ತಿರುವುದು ಸಂತ್ರಸ್ತರಲ್ಲೂ ಆಶಾದಾಯಕ ಭರವಸೆ ಮೂಡಿಸಿತ್ತು. ಸರ್ಕಾರದ ವಿಳಂಬ ಧೋರಣೆಯಿಂದ ಎಂಡೋ ಸಂತ್ರಸ್ತ ರೋಗಿಗಳೂ ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಸೂಕ್ತ ಪರಿಗಣನೆಯೊಂದಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಿಫಾರಸು ನಡೆಸಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬೇಕಾಗಿದೆ. ನ್ಯಾಶನಲ್ ಮೆಡಿಕಲ್ ಕೌನ್ಸಿಲ್‌ನ ಅನುಮೋದನೆಗಾಗಿ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ಭಾಗವಾಗಿ ಜನರಲ್ ಆಸ್ಪತ್ರೆ ಮುಂದುವರಿಯಲಿದೆ. ಡಾ.ಜಮಾಲ್ ಅಹಮ್ಮದ್, ಸೂಪರಿಂಟೆಂಡೆಂಟ್, ಸರ್ಕಾರಿ ಜನರಲ್ ಆಸ್ಪತ್ರೆ, ಕಾಸರಗೋಡು