

ಉಡುಪಿ: ಸರ್ಕಾರದಿಂದ ಜಾರಿಗೆ ತಂದಿರುವ ಆರೋಗ್ಯ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಮಾನ್ಯ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ಸರಳೀಕರಣಗೊಳಿಸುವ ಕೆಲಸವಾಗಬೇಕು. ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು ಎಂದು ಉಡುಪಿ&-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹರಿಹರದ ಹಫ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಆರೋಗ್ಯ ಸಮಸ್ಯೆ ಇರುವವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪತ್ರ ಪಡೆದುಕೊಂಡು ತೆರಳಬೇಕು. ಹೆಚ್ಚಿನ ಸಂದರ್ಭದಲ್ಲಿ ಬೆಡ್ ದೊರೆಯುವುದೇ ಕಷ್ಟ. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಸಾಲ ಮಾಡಬೇಕಾದ ಅನಿವಾರ್ಯತೆಗಳು ನಿಮಾರ್ಣವಾಗುತ್ತದೆ. ಈ ಎಲ್ಲಾ ತಾಪತ್ರಯಗಳ ನಿವಾರಣೆಗೆ ಸರ್ಕಾರದಿಂದಲೇ ಸರಳಿಕೃತ ಆರೋಗ್ಯ ಕಾರ್ಡ್ ವಿತರಣೆಯಾಗಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿಮಾರ್ಣವಾಗಬೇಕು. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ನಮ್ಮ ಮೂಲಭೂತ ಆದ್ಯತೆಯಾಗುವ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳು ಜಾರಿಗೆ ಬರಬೇಕು ಎಂದರು. ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಕುಮಾರಸ್ವಾಮಿ ಉಪಸ್ಥಿತರಿದ್ದರು.