ಮೀಸಲು ಸೋತವರಿಗೆ ಜನರಲ್ ಚಾನ್ಸ್! ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ನಡುಕ

Ranjini
Published on

| ಸೋರಲಮಾವು ಶ್ರೀಹರ್ಷ ತುಮಕೂರು/ ಮರಿದೇವ ಹೂಗಾರ ಹುಬ್ಬಳ್ಳಿ

ಮೀಸಲು ಸ್ಥಾನದಲ್ಲಿ ಸೋತ ಅಭ್ಯರ್ಥಿಗಳ ಮತ ಸಾಮಾನ್ಯ ಸ್ಥಾನದ ಅಭ್ಯರ್ಥಿಗಳು ಪಡೆದ ಮತಕ್ಕಿಂತ ಹೆಚ್ಚಿದ್ದರೆ, ಆತ ಸಾಮಾನ್ಯ ಕ್ಷೇತ್ರದಿಂದಲೂ ಆಯ್ಕೆಯಾಗಲು ಅವಕಾಶವಿದೆ. ಈ ಸೋಲಿನ ಸಮೀಕರಣದ ಅರಿವಿರುವ ಸಾಮಾನ್ಯ ಸ್ಥಾನದ ಅಭ್ಯರ್ಥಿಗಳು ‘ಒಂದೇ ಮತ’ದ ದಾಳ ಉರುಳಿಸುತ್ತಿದ್ದಾರೆ. ಇದು ಒಂದಕ್ಕಿಂತ ಹೆಚ್ಚು ಸ್ಥಾನಗಳಿರುವ ಕ್ಷೇತ್ರದಲ್ಲಿ ಚುನಾವಣೆಗಾಗಿ ಮಾಡಿಕೊಂಡ ಸಿಂಡಿಕೇಟ್​ಗಳಲ್ಲಿ ಒಡಕು ಮೂಡಲು ಕಾರಣವಾಗಿದೆ.

ಕರ್ನಾಟಕ ಪಂಚಾಯತ್​ರಾಜ್ ನಿಯಮಗಳು, 1993ರ ನಿಯಮ, 74ರ ಉಪನಿಯಮ(2)(ಎ) ಪ್ರಕಾರ ಸಾಮಾನ್ಯ ಸ್ಥಾನಗಳು ಮಾತ್ರ ಇರುವಲ್ಲಿ ಅವರೋಹಣ ಕ್ರಮದಲ್ಲಿ ಅತಿ ಹೆಚ್ಚಿನ ಮತ ಪಡೆದವರು ಸಮೀಕರಣಕ್ಕೆ ಅವಕಾಶವಿಲ್ಲದಂತೆ ಜಯ ಗಳಿಸುತ್ತಾರೆ. 74ರ ಉಪನಿಯಮ(2)(ಬಿ) ಪ್ರಕಾರ, ಮೀಸಲು ಸ್ಥಾನಗಳಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳನ್ನು ಸಾಮಾನ್ಯ ಸ್ಥಾನದ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.

ಸಮೀಕರಣ ಹೇಗೆ?: ನಿಗದಿತ ಒಂದು ವಾರ್ಡ್​ನಲ್ಲಿ ಎಸ್​ಸಿ ಮಹಿಳೆ, ಎಸ್​ಸಿ, ಎಸ್​ಟಿ (ಮಹಿಳೆ), ಎಸ್​ಟಿ, ಹಿಂದುಳಿದ ‘ಅ’, ಸಾಮಾನ್ಯ ಮೀಸಲು ಹೀಗೆ 6 ಕ್ಷೇತ್ರಗಳಿವೆ ಎಂದುಕೊಳ್ಳೋಣ. ಇವುಗಳಲ್ಲಿ- ‘ಎಸ್​ಸಿ ಮಹಿಳೆ’ ವಿಭಾಗದಲ್ಲಿ ಸೋತವರನ್ನು ‘ಎಸ್​ಸಿ’ ವಿಭಾಗದಲ್ಲಿ ಸ್ಪರ್ಧಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಎಸ್​ಸಿ ಸ್ಪರ್ಧಿಗಳಿಗಿಂತ ಎಸ್​ಸಿ ಮಹಿಳೆ ವಿಭಾಗದಲ್ಲಿ ಸೋತವರಿಗೇ ಹೆಚ್ಚು ಮತ ಬಂದಿದ್ದಲ್ಲಿ, ಮಹಿಳೆಯೇ ಗೆದ್ದಿರುವುದಾಗಿ ಘೊಷಿಸಲಾಗುತ್ತದೆ. ಎಸ್​ಟಿ (ಮಹಿಳೆ) ಮತ್ತು ಎಸ್​ಟಿ ವಿಭಾಗಕ್ಕೂ ಇದು ಅನ್ವಯವಾಗುತ್ತದೆ. ಹಿಂದುಳಿದ ‘ಅ’ ಮೀಸಲು ಕ್ಷೇತ್ರದವರಿಗೆ ಇಂಥ ಸವಾಲು ಇಲ್ಲ. ಆದರೆ, ಸಾಮಾನ್ಯ ಕ್ಷೇತ್ರದವರಿಗೆ ಎದುರಾಗುವ ಸವಾಲು ಸಾಮಾನ್ಯದ್ದಲ್ಲ. ಎಸ್​ಸಿ ಮಹಿಳೆ, ಎಸ್​ಸಿ, ಎಸ್​ಟಿ ಮಹಿಳೆ, ಎಸ್​ಟಿ, ಹಿಂದುಳಿದ ಅ ವರ್ಗ ಇವುಗಳಲ್ಲಿ ಸೋತ ಎಲ್ಲ ಅಭ್ಯರ್ಥಿಗಳನ್ನೂ ಮತ ಎಣಿಕೆ ವೇಳೆ ಸಾಮಾನ್ಯ ವರ್ಗದ ಸ್ಪರ್ಧಿಗಳು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಉಳಿದ ಕ್ಷೇತ್ರದಲ್ಲಿ ಸೋತವರು ಪಡೆದ ಮತ ಸಾಮಾನ್ಯ ಅಭ್ಯರ್ಥಿ ಪಡೆದ ಮತಕ್ಕಿಂತ ಹೆಚ್ಚು ಇದ್ದಲ್ಲಿ, ಅವರನ್ನೇ ವಿಜೇತರು ಎಂದು ಘೊಷಿಸಲಾಗುತ್ತದೆ. ಅಂದರೆ, ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಇನ್ನೊಬ್ಬ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದ ಮಾತ್ರಕ್ಕೆ ಗೆಲ್ಲುವುದಿಲ್ಲ. ಗಳಿಸಿದ ಮತಗಳ ಸಂಖ್ಯೆ ಉಳಿದ ಎಲ್ಲ ಅಭ್ಯರ್ಥಿಗಳಿಗಿಂತ ಜಾಸ್ತಿ ಇದ್ದರಷ್ಟೇ ವಿಜಯಿಯಾಗಲು ಸಾಧ್ಯ. ಹೀಗಾಗಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಈ ಎಲ್ಲ ಮೀಸಲು ಅಭ್ಯರ್ಥಿಗಳು ಭಯ ಹುಟ್ಟಿಸಿದ್ದಾರೆ.

ನನಗಷ್ಟೇ ಮತ ಕೊಡಿ

ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನೀರಿನಂತೆ ಹಣ ಖರ್ಚು ಮಾಡಿದರೂ ಉಳಿದೆಲ್ಲ ಮೀಸಲು ಕ್ಷೇತ್ರದವರಿಗಿಂತ ಹೆಚ್ಚು ಮತ ಪಡೆಯದೆ ಇದ್ದರೆ ಸೋಲುತ್ತಾರೆ. ಹಾಗಾಗಿ ಕೆಲ ಸಾಮಾನ್ಯ ಕ್ಷೇತ್ರದವರು ತನಗೆ ಮಾತ್ರವೇ ಮತ (ಸಿಂಗಲ್ ವೋಟ್) ಹಾಕಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಇದು ಮೀಸಲು ಅಭ್ಯರ್ಥಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

ಜಿದ್ದು ಗೆದ್ದ ಜಿಗಳೂರ ಜನ!

ರೋಣ: ಪತ್ಯೇಕ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕು ಹಾಗೂ ತಮ್ಮೂರಿನಲ್ಲಿಯೇ ಗ್ರಾಪಂ ಕಚೇರಿ ಕಟ್ಟಡ ನಿರ್ವಿುಸಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ಜಿಗಳೂರ ಗ್ರಾಮಸ್ಥರು ಕೊನೆಗೂ ಜಿದ್ದು ಗೆದ್ದಿದ್ದಾರೆ. ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ವಿುಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸುತ್ತಿರುವ ಧೋರಣೆ ಖಂಡಿಸಿ ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದರು. ಆದರೆ, ಜಿಗಳೂರ ಗ್ರಾಮ ವ್ಯಾಪ್ತಿಯ ಕ್ಷೇತ್ರಗಳಿಗೆ ಹೊಸಳ್ಳಿ ಗ್ರಾಮದ ನಾಲ್ವರು ನಾಮಪತ್ರ ಸಲ್ಲಿಸಿದರು. ಆಗ ಜಿಗಳೂರ ಗ್ರಾಮಸ್ಥರು, ಹೊಸಳ್ಳಿಯ ಈ ನಾಲ್ವರು ನಾಮಪತ್ರ ಹಿಂಪಡೆಯುವಂತೆ ತಗಾದೆ ತೆಗೆದರು. ಕೊನೇ ಕ್ಷಣದಲ್ಲಿ ಜಿಗಳೂರು ಗ್ರಾಮದ 17 ಜನರು ಕೂಡ ನಾಮಪತ್ರ ಸಲ್ಲಿಸಿದರು. ಇದರಿಂದ ಜಿಗಳೂರ ಗ್ರಾಮಸ್ಥರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಭಾವಿಸಿ ಹೊಸಳ್ಳಿ ಗ್ರಾಮದ ನಾಲ್ವರು ನಾಮಪತ್ರಗಳನ್ನು ಹಿಂತೆಗೆದುಕೊಂಡರು. ಇದನ್ನೇ ಕಾಯುತ್ತ ಕುಳಿತಿದ್ದ ಜಿಗಳೂರ ಗ್ರಾಮಸ್ಥರು, ತಾವು ಸಲ್ಲಿಸಿದ್ದ 17 ನಾಮಪತ್ರಗಳನ್ನು ಶನಿವಾರ ಹಿಂಪಡೆದರು. ಜಿಗಳೂರು ಗ್ರಾಮಸ್ಥರು ಚಾಣಾಕ್ಷತನ ತೋರಿಸುವ ಮೂಲಕ ಈ ಬಾರಿಯೂ ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೀಗೆ..

ಒಂದಕ್ಕಿಂತ ಹೆಚ್ಚು ಸ್ಥಾನವಿರುವ ಕ್ಷೇತ್ರದಲ್ಲಿ ಮೀಸಲಿರುವ ಸ್ಥಾನಗಳು ಮತ್ತು ಸಾಮಾನ್ಯ ಸ್ಥಾನಗಳಿಗೆ ಫಲಿತಾಂಶ ಘೊಷಿಸುವಾಗ ಸಾಮಾನ್ಯ ಅಭ್ಯರ್ಥಿ ಫಲಿತಾಂಶ ಕೊನೆಯಲ್ಲಿ ಘೊಷಣೆಯಾಗುತ್ತದೆ. ಮೊದಲು ಕ್ರಮವಾಗಿ ಎಸ್​ಸಿ (ಮ), ಎಸ್​ಸಿ, ಎಸ್​ಟಿ (ಮ), ಎಸ್​ಟಿ, ಬಿಎಸಿಎಂ-ಎ (ಮ), ಬಿಸಿಎಂ (ಎ), ಬಿಸಿಎಂ- ಬಿ (ಮ), 8.ಬಿಸಿಎಂ (ಬಿ), ಸಾಮಾನ್ಯ (ಮ) ಸ್ಥಾನದ ಘೋಷಣೆ ಆಗುತ್ತದೆ. ಅಂತಿಮವಾಗಿ ಸಾಮಾನ್ಯ ಕ್ಷೇತ್ರದ ವಿಜೇತರ ಘೋಷಣೆ ಪ್ರಕ್ರಿಯೆ ಶುರುವಾಗುತ್ತದೆ. ಆಗ ಮೀಸಲು ಸ್ಥಾನದಿಂದ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಯನ್ನೂ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಯೆಂದು ಪರಿಗಣಿಸಲಾಗುತ್ತದೆ. ಆಗ ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದಿದ್ದ ಅಭ್ಯರ್ಥಿ ಗೆದ್ದರೂ ಮೀಸಲು ಸೋತ ಅಭ್ಯರ್ಥಿಗಿಂತ ಕಡಿಮೆ ಮತ ಸಿಕ್ಕಿದ್ದರೆ ಸೋಲು ಅನುಭವಿಸಬೇಕಾಗುತ್ತದೆ.

ಮಹಿಳಾ ಪ್ರಾಬಲ್ಯ

ಮಹಿಳೆಯರು ತಮಗಿರುವ ಮೀಸಲು ಕ್ಷೇತ್ರವಲ್ಲದೆ ಸಾಮಾನ್ಯ ಕ್ಷೇತ್ರದಿಂದಲೂ ಸ್ಪರ್ಧಿಸಿ ಆಯ್ಕೆಯಾಗಬಹುದು. ಹಾಗಾಗಿ ಗ್ರಾಪಂಗಳಲ್ಲಿ ಮಹಿಳಾ ಪ್ರಾಬಲ್ಯ ಹೆಚ್ಚುವ ಸಾಧ್ಯತೆಯಿದೆ.

ಪಿಟಿಪಿ ಪುತ್ರ-ತಮ್ಮ ಜಿದ್ದಾಜಿದ್ದಿ

ಹರಪನಹಳ್ಳಿ (ಬಳ್ಳಾರಿ): ತಾಲೂಕಿನ ಲಕ್ಷೀಪುರ ಗ್ರಾಪಂನಿಂದ ಮಾಜಿ ಸಚಿವ, ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕರ ಪುತ್ರ ಪಿ.ಟಿ.ಭರತ್ ಹಾಗೂ ಸಹೋದರ ಪಿ.ಟಿ. ಶಿವಾಜಿ ನಾಯ್ಕ ಅಖಾಡಕ್ಕೆ ಇಳಿದಿದ್ದಾರೆ. ಹಿಂದಿನ ಅವಧಿಯಲ್ಲಿ ಲಕ್ಷ್ಮೀಪುರ ಗ್ರಾಪಂನಿಂದ ಪಿ.ಟಿ.ಭರತ್ ಆಯ್ಕೆಯಾಗಿ ಅಧ್ಯಕ್ಷರಾಗಿದ್ದರು. ಈ ಬಾರಿ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಬೆಂಬಲಿತ, ಸ್ವಂತ ಚಿಕ್ಕಪ್ಪ ಪಿ.ಟಿ.ಶಿವಾಜಿನಾಯ್ಕ ಸ್ಪರ್ಧಿಸಿರುವುದು ವಿಶೇಷ.

ಕಣದಲ್ಲಿ ಕಂಡಿದ್ದು...

  • ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಉಮೇದುವಾರಿಕೆ ಹಿಂತೆಗೆದುಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಪ್ರಕರಣ ನಡೆದಿದೆ.
  • ಚಿತ್ರದುರ್ಗ- ದಾವಣಗೆರೆ ಜಿಲ್ಲೆಯ ಹಲವೆಡೆ ಮಹಿಳಾ ಮತದಾರರನ್ನು ಸೆಳೆಯಲು ಬಳಕೆಯಾಗುತ್ತಿವೆ. ಚಿನ್ನದ ಮೂಗುತಿ ಬೆಳ್ಳಿಯ ನಾಣ್ಯ, ಕಾಲುಂಗರ, ಗಣೇಶನ ವಿಗ್ರಹ, ಲಕ್ಷ್ಮಿದೇವಿ ಮುಖ ಹೀಗೆ ತರಹೇವಾರಿ ಆಭರಣಗಳನ್ನು ನೀಡಲಾಗುತ್ತಿದೆ.ಕೆಲ ಭಾಗಗಳಲ್ಲಿ ಕಳೆದೊಂದು ವಾರದಿಂದ ಮನೆ ಮನೆಗೂ ಪಾರ್ಸಲ್ ಮೂಲಕ ಮಾಂಸ ಕಳಿಸಲಾಗುತ್ತಿದೆ.
  • ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಪಂ ಚುನಾವಣೆಯಲ್ಲಿ 86 ವರ್ಷದ ಹಿರಿಯ, ನಿವೃತ್ತ ಶಿಕ್ಷಕ ಎ.ಎಂ.ಚನ್ನವೀರಸ್ವಾಮಿ ಸ್ಪರ್ಧಿಸುವ ಮೂಲಕ ತಾಲೂಕಿನ ಹಿರಿಯ ಸ್ಪರ್ಧಾಳು ಹಿರಿಮೆಗೆ ಪಾತ್ರರಾಗಿದ್ದಾರೆ.
  • ಈಗಾಗಲೆ ಉಮೇದುವಾರಿಕೆ ಸಲ್ಲಿಸಿರುವವರ ಪೈಕಿ ಮೀಸಲುವಾರು ತಲಾ ಒಬ್ಬರನ್ನು ಹರಾಜು ಮೂಲಕ ಆಯ್ಕೆ ಮಾಡುವ ಯತ್ನ ಬಳ್ಳಾರಿ ಜಿಲ್ಲೆ ಚಂದ್ರಶೇಖರಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಈ ಸಂಬಂಧ ಹತ್ತು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಭಯಹುಟ್ಟಿಸಿದ ಗಂಡೆದೆ ಗಂಗಮ್ಮ!

ತುಮಕೂರು: ಚುನಾವಣೆಯಲ್ಲಿ ಗೆದ್ದರೆ ಮಾಡುವ ಕೆಲಸಗಳ ಬಗ್ಗೆ ಮತದಾರರಿಗೆ ಭರವಸೆ ಕೊಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಗೆದ್ದರೆ ಮಾಡುವ ಕೆಲಸಗಳ ಜತೆಗೆ ಸೋತರೆ ಏನೆಲ್ಲಾ ಮಾಡುವೆ ಎಂಬುದನ್ನೂ ಕರಪತ್ರದಲ್ಲಿ ಪ್ರಕಟಿಸಿದ್ದಾರೆ. ತುಮಕೂರು ತಾಲೂಕಿನ ಹೆಬ್ಬೂರು ಗ್ರಾಪಂ ಕಲ್ಕೆರೆ ಕ್ಷೇತ್ರದಿಂದ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿರುವ ಎಚ್.ಗಂಗಮ್ಮ ಗೆದ್ದರೆ ಹಾಗೂ ಸೋತರೆ ಮಾಡುವ ಕೆಲಸಗಳ ಪಟ್ಟಿ ನೀಡಿದ್ದಾರೆ. ಸೋತರೆ ಮಾಡಲಿರುವ ಕೆಲಸಗಳ ಪಟ್ಟಿಯಲ್ಲಿ ಅನರ್ಹ ಪಡಿತರ ಚೀಟಿ ರದ್ದುಪಡಿಸುವುದಾಗಿ ಹೇಳಿರುವುದು ತಪು್ಪ ಮಾಡಿದವರಲ್ಲಿ ಭಯ ಹುಟ್ಟಿಸಿದ್ದು, ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

ಸೋತರೆ ಮಾಡುವ ಕೆಲಸಗಳ ಪಟ್ಟಿಯಲ್ಲಿ, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಮೈತ್ರಿ, ಮನಸ್ವಿನಿ, ವಿಧವಾ ವೇತನ ಪಡೆಯುತ್ತಿರುವ 40 ಕುಟುಂಬಗಳ ಹಣ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ವೆ ನಂ.86ರಲ್ಲಿ ಹಳೆಯ ದಾಖಲೆಯಂತೆ ಸ್ಮಶಾನ ಮಾಡಿಸುವುದು ಹಾಗೂ ಕಲ್ಕೆರೆ ಠಾಣಾ ಜಾಗ ಒತ್ತುವರಿ ಮಾಡಿರುವ 11 ಕುಟುಂಬಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದಾರೆ. ಇದು ಸಹಜವಾಗಿ ತಪ್ಪಿತಸ್ಥ ಮತದಾರರಲ್ಲಿ ಭೀತಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net