

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಅಂಕ ಪ್ರಗತಿಯ ದ್ಯೋತಕವಲ್ಲ. ಸಾಧನೆ ಮಾಡುವವನಿಗೆ ಸುಖ ಸಿಗುವುದಿಲ್ಲ, ಸುಖ ಬಯಸುವವನಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯೇ ಗುರಿಯಾಗಿರಬೇಕು ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಹೇಳಿದರು.
ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಮಂಚಿ ಕೊಳ್ನಾಡು ಸರ್ಕಾರಿ ಶಾಲಾ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಮಾತನಾಡಿ, ಶಿಕ್ಷಣ ಇದ್ದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಇಂದು ವಿದ್ಯಾರ್ಥಿ ವೇತನ ಪಡೆದಂತೆ ಮುಂದೆ ನಾವು ಸಮಾಜಕ್ಕೆ ನೀಡುವ ಕಾರ್ಯ ಆಗಬೇಕು ಎಂದರು.
ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ, ಗ್ರಾಹಕರಿಗೆ ಶೇ.25 ಡಿವಿಡೆಂಡ್ ೋಷಿಸಿದರು.
ಇನ್ನೂರಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ದಿವ್ಯಾಂಗ ಬಾಲಕಿಯ ಚಿಕಿತ್ಸೆಗೆ ಸಹಾಯಧನ ನೀಡಲಾಯಿತು. ಮೂರು ಮಂದಿ ಮೂರ್ತೆದಾರರನ್ನು ಹಾಗೂ ಸಂಘದ ಮಾಜಿ ನಿರ್ದೇಶಕ ಮುತ್ತಪ್ಪ ಪೂಜಾರಿ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ವಿಟ್ಠಲ ಬೆಳ್ಚಾಡ, ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನ ಪಾಲು, ರಮೇಶ್ ಅನ್ನಪ್ಪಾಡಿ, ಜಯಶಂಕರ್ ಕಾನ್ಸಲೆ, ಸುಜಾತಾ ಎಂ., ವಾಣಿ ವಸಂತ್, ಅರುಣ್ ಕುಮಾರ್, ಆಶೀಶ್ ಪೂಜಾರಿ, ಚಿದಾನಂದ ಎಂ.ಕಡೇಶ್ವಾಲ್ಯ ಮೊದಲಾದವರಿದ್ದರು. ಎಜಿಎಂ ಶಿಲ್ಪಾ ಸ್ವಾಗತಿಸಿದರು. ಮಮತಾ ಜಿ.ಚೇಳೂರು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ನಿರೂಪಿಸಿದರು. ವೇಣೂರು ಶಾಖಾ ವ್ಯವಸ್ಥಾಪಕಿ ವಿಜಯ ಕೆ. ವಂದಿಸಿದರು.
ಗ್ರಾಹಕರ ಸಹಕಾರ, ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ಪರಿಶ್ರಮದಿಂದ ಸಂಘದ ಎಲ್ಲಾ ಶಾಖೆಗಳು ಪ್ರಗತಿಯ ಹಾದಿಯಲ್ಲಿದೆ. ಹೆಚ್ಚು ಶಾಖೆಗಳ ಸ್ಥಾಪನೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ಹೆಚ್ಚು ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಕೆ.ಸಂಜೀವ ಪೂಜಾರಿ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ