ಅಧಿಕಾರಿಗಳು ವರ್ತನೆ ಸರಿಪಡಿಸಿಕೊಳ್ಳದಿದ್ರೆ ಸಹಿಸಲ್ಲ

Harihara, city council, assembly
Published on

ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಎಚ್ಚರಿಕೆ I ಹರಿಹರ ನಗರಸಭೆಯ ಸಾಮಾನ್ಯ ಸಭೆ

ಹರಿಹರ: ಪೌರಾಯುಕ್ತರು ಹಾಗೂ ಅಧಿಕಾರಿಗಳು ವರ್ತನೆ ಸರಿಪಡಿಸಿಕೊಳ್ಳಬೇಕು. ಇದೇ ರೀತಿ ಮುಂದುವರಿದರೆ ಸಹಿಸುವುದಿಲ್ಲ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಎಚ್ಚರಿಕೆ ನೀಡಿದರು.

ನಗರಸಭೆ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ತುರ್ತು ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನು ನಗರಸಭಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಒಂದು ತಿಂಗಳು ಕಳೆದರೂ ನಗರಸಭೆಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಆಯುಕ್ತರು ಸೌಜನ್ಯಕ್ಕೂ ಒಂದು ಬಾರಿಯ ಚರ್ಚೆ ಮಾಡಿಲ್ಲ. ಇದು ನನ್ನ ಒಬ್ಬ ಸಮಸ್ಯೆಯಲ್ಲ ಬಹುತೇಕ ಸದಸ್ಯರದ್ದು.

ನಾನು ಒಬ್ಬ ಮಹಿಳೆ ಎನ್ನುವ ಕಾರಣಕ್ಕೊ ಅಥವಾ ಪರಿಶಿಷ್ಟರು ಎಂಬ ಕಾರಣಕ್ಕೊ ಇಲ್ಲಿನ ಅಧಿಕಾರಿಗಳು ನನಗೆ ಗೌರವ ಕೊಡದೆ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಹಿರಿಯ ಸದಸ್ಯ ಎ.ವಾಮನಮೂರ್ತಿ ಮಾತನಾಡಿ, ಜಲಸಿರಿ ಯೋಜನೆ ನಗರದಲ್ಲಿ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಕೆಲವೊಂದು ವಾರ್ಡ್‌ಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಇದಲ್ಲದೆ ಬೇಸಿಗೆ ಸಂದರ್ಭದಲ್ಲಿ ನಮ್ಮ ಬಳಿ ನೀರು ಶೇಖರಣ ಘಟಕವೇ ಇಲ್ಲ. ಹಾಗಿದ್ದಾಗ ಬೇಸಿಗೆಯಲ್ಲಿ 24 ತಾಸು ನೀರು ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಬಾಬುಲಾಲ್ ಹಾಗೂ ನಾಗರತ್ನ ಧ್ವನಿಗೂಡಿಸಿದರು.

ಸದಸ್ಯ ಸೈಯದ್ ಅಲೀಂ ಮಾತನಾಡಿ, ನಗರದಲ್ಲಿನ ಸಣ್ಣಪುಟ್ಟ ಹೋಟೆಲ್, ಬೀಡಾ ಅಂಗಡಿ, ಕಟಿಂಗ್ ಶಾಪ್ ಪರವಾನಗಿ ನವೀಕರಣಕ್ಕೆ 3 ಸಾವಿರದಿಂದ 5000ರ ವರೆಗೂ ತೆಗೆದುಕೊಳ್ಳುತ್ತಿದ್ದಾರೆ. ಲೈಸೆನ್ಸ್ ದರವನ್ನು ಕಡಿಮೆ ಮಾಡಿಸುವಂತೆ ಒತ್ತಾಯಿಸಿದರು.

ಸದಸ್ಯ ಆರ್.ಸಿ.ಜಾವೀದ್ ಮಾತನಾಡಿ, ದಾವಣಗೆರೆ ನಗರ ಪಾಲಿಕೆಯಲ್ಲಿ ಆನ್‌ಲೈನ್ ಮೂಲಕ ಖಾತೆ ಉತಾರ ನೀಡುತ್ತಿದ್ದಾರೆ. ಆದರೆ, ಹರಿಹರದಲ್ಲಿ ಏಕೆ ಇಲ್ಲ ಎಂದರು. ಇದಕ್ಕೆ ಬೆಂಬಲಿಸಿ ಮಾತನಾಡಿದ ಸದಸ್ಯ ಎಸ್.ಎಂ.ವಸಂತ್, ತಾಲೂಕು ಕಚೇರಿಯಲ್ಲಿ ಪಾಣಿ ನಂಬರ್ ಹೇಳಿದರೆ ಉತಾರ ನೀಡುತ್ತಾರೆ. ಹಾಗೆಯೇ ನಗರಸಭೆಯಲ್ಲೂ ಒಂದು ಬಾರಿ ನವೀಕರಣಗೊಂಡರೂ ಮತ್ತೆ ದಾಖಲಾತಿಗಳನ್ನು ನೀಡಿ ಖಾತೆ ಉತಾರ ಪಡೆಯಬೇಕಾಗಿದೆ. ಇದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಉಪಾಧ್ಯಕ್ಷ ಎಂ. ಜಂಬಣ್ಣ ಮಾತನಾಡಿ, ನಗರದ ರಸ್ತೆಗಳ ಗುಂಡಿಗಳ ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ಸದಸ್ಯ ರಜನಿಕಾಂತ್ ಮಾತನಾಡಿ, ನಗರಸಭೆ ಆಡಳಿತವು ಜಾತಿ ವ್ಯವಸ್ಥೆಯ ಮೇಲೆ ಹಿಂದಿನಿಂದಲೂ ಆಡಳಿತ ಮಾಡಿಕೊಂಡು ಬಂದಿದ್ದನ್ನು ನೋಡಿದ್ದೇವೆ. ಹಾಗಾಗಿ, ಪೌರಾಯುಕ್ತರು ಕುಗ್ಗುವುದು ಬೇಡ. ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದರು.

ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಸದಸ್ಯರಾದ ಶಂಕರ್ ಖಟಾವಕರ್, ಮುಜಾಮಿಲ್, ಸದಸ್ಯ ದಾದಾ ಖಲಂದರ್, ದಿನೇಶ್ ಬಾಬು, ರತ್ನಮ್ಮ ಉಜ್ಜೇಶ್, ಉಷಾ ಕಿರಣ್, ಸುಮಿತ್ರಾ ಕೆ. ಮರಿದೇವ್, ಲಕ್ಷ್ಮಿ ದುರ್ಗೋಜಿ, ಬಿ.ಅಲ್ತಾಫ್, ಕೆ.ಜಿ. ಸಿದ್ದೇಶ್, ಪಿ.ಎನ್. ವಿರೂಪಾಕ್ಷಿ, ನಿಂಬಕ್ಕ ಚಂದಾಪುರ, ಫಕೀರಮ್ಮ ಇತರರಿದ್ದರು.

ಹರಿಹರ, ಸಭೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net