ಗೊಂದಲದ ಗೂಡಾದ ಸಾಮಾನ್ಯ ಸಭೆ

27blrp3
ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಎ.ಆರ್.ಅಶೋಕ್ ಹಾಗೂ ದಾನಿ, ಸಾಂತಕುಮಾರ್ ಇತರರ ನಡುವೆ ಮಾತಿನ ಚಕಮಕಿ ನಡೆದ ಸಂದರ್ಭ.
Published on

ಬೇಲೂರು: ಅಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆ ಹಾಗೂ ಶಾಸಕ ಎಚ್.ಕೆ.ಸುರೇಶ್ ಸಮ್ಮುಖದಲ್ಲಿ ಸೋಮವಾರ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಪುರಸಭೆ ಸಾಮಾನ್ಯ ಸಭೆ ಪ್ರಾರಂಭದಲ್ಲೇ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸು ಹಂತ ತಲುಪಿ ಗೊಂದಲದ ಗೂಡಾಯಿತು.

ಸಭೆ ಪ್ರಾರಂಭವಾಗುತಿದ್ದಂತೆಯೇ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎ.ಆರ್.ಅಶೋಕ್ ಮಾತನಾಡಿ, ವಾರ್ಡ್ ನಂ. 4ರಲ್ಲಿ ಮಾಜಿ ಅಧ್ಯಕ್ಷರೊಬ್ಬರು ಕಟ್ಟುತ್ತಿರುವ ಕಟ್ಟಡ ಅಕ್ರಮವಾಗಿದ್ದು, ಕಟ್ಟಡ ಪೂರ್ಣಗೊಳ್ಳದೆ ಇ- ಖಾತೆ ಸೇರಿದಂತೆ ಎಲ್ಲ ದಾಖಲೆಗಳನ್ನು ಮಾಡಿ ಕೊಡಲಾಗಿದೆ. ಇಲ್ಲಿ ಬಡವರಿಗೊಂದು ನ್ಯಾಯ, ಇತರಿಗೊಂದು ನ್ಯಾಯವೇ? ಇದಕ್ಕೆ ಮುಖ್ಯಾಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕೆಂದು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಮಧ್ಯಪ್ರವೇಶಿಸಿದ ಸದಸ್ಯ ದಾನಿ, ನಾನು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ. ಕಟ್ಟಡ ಪೂರ್ಣಗೊಂಡ ನಂತರವೇ ದಾಖಲೆಗಳನ್ನು ನೀಡಿ ಇ- ಖಾತೆ ಮಾಡಿಸಿದ್ದೇನೆ. ಬೇರೆಯವರ ರೀತಿ ನಾನು ಯಾವುದೇ ಸುಳ್ಳು ಮಾಹಿತಿ ನೀಡಿ ಒತ್ತುವರಿ ಮಾಡಿರುವುದಾಗಲಿ ಅಥವಾ ಅಕ್ರಮ ನಿವೇಶನಗಳಿಗೆ ಇ-ಸ್ವತ್ತು ಪಡೆದಿಲ್ಲ. ಯಾರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುವುದು ಪಟ್ಟಣದ ಜನರಿಗೆ ತಿಳಿದಿದೆ ಎಂದು ಅವರೂ ಏರುಧ್ವನಿಯಲ್ಲಿ ಮಾತನಾಡಿದರು. ಈ ಸಂದರ್ಭ ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ದಾನಿ ಅವರ ಬೆಂಬಲಕ್ಕೆ ಬಂದ ಸದಸ್ಯ ಶಾಂತಕುಮಾರ್ ಇಲ್ಲಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ? ಯಾರು ಹಣ ಲೂಟಿ ಮಾಡಿದ್ದಾರೆ? ಯಾರ ಬೆಂಬಲದಿಂದ ಕುತಂತ್ರ ನಡೆಯುತ್ತಿದೆ ಎಂಬುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಸಭೆ ನಡೆಯಲು ಬಿಡದೆ ವಯಕ್ತಿಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಸದಸ್ಯ ಅಶೋಕ್ ಮತ್ತು ಶಾಂತಕುಮಾರ್ ಹಾಗೂ ದಾನಿ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸಭಾಧ್ಯಕ್ಷರ ಟೇಬಲ್ ಬಳಿ ಹೋಗಿ ಕಿತ್ತಾಡತೊಡಗಿದರು. ಈ ಎಲ್ಲ ಘಟನೆಗಳನ್ನು ಗಮನಿಸುತ್ತಿದ್ದ ಶಾಸಕ ಎಚ್.ಕೆ.ಸುರೇಶ್, ಎದ್ದು ಸದಸ್ಯರನ್ನು ಸಮಾಧಾನಪಡಿಸಿ ಸಭೆಯನ್ನು ಹತೋಟಿಗೆ ತಂದರು. ಸದಸ್ಯರು ವಯಕ್ತಿಕ ವಿಚಾರಗಳಿದ್ದರೆ ಸಭೆಯಿಂದ ಹೊರಗೆ ಹೋಗಿ ಮಾತಾಡಿಕೊಳ್ಳಿ. ಅದನ್ನು ಬಿಟ್ಟು ಇಲ್ಲದ ಸಲ್ಲದ ವಿಚಾರಗಳನ್ನು ಸಭೆಯಲ್ಲಿ ಮಾತನಾಡಬೇಡಿ. ಏನಿದ್ದರೂ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಚರ್ಚೆ ಇದ್ದರೆ ಮಾತ್ರ ಇಲ್ಲಿ ನಾನು ಸಭೆಯಲ್ಲಿ ಕೂರುತ್ತೇನೆ. ಇಲ್ಲದಿದ್ದರೆ ನಾನೇ ಸಭೆಯಿಂದ ಹೋಗುತ್ತೇನೆ ಎಂದು ಎಚ್ಚರಿಸಿದರು. ಸದಸ್ಯರು ಸಮಾಧಾನಗೊಂಡ ನಂತರ ಸಭೆ ಮುಂದುವರಿಯಿತು.

ಸದಸ್ಯ ಶಾಂತಕುಮಾರ್ ಮಾತನಾಡಿ, ಇತ್ತೀಚಿಗೆ ಪುರಸಭೆಯಲ್ಲಿ ಖಾತೆ ಬದಲಾವಣೆಯಲ್ಲಿ ಒಬ್ಬರ ಖಾತೆ ಇನ್ನೊಬ್ಬರಿಗೆ ಮಾಡುವ ಮೂಲಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪುರಸಭೆಯ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಖಾತೆ ಮಾಡಿಕೊಳ್ಳುವುದರ ಜತೆಗೆ ಮನಸ್ಸಿಗೆ ಬಂದಂತೆ ಕಂದಾಯ ವಸೂಲಿ ಮಾಡುವ ಮೂಲಕ ಪುರಸಭೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತಿದ್ದಾರೆ. ಅಲ್ಲದೆ ಯಾವ ಜಿಲ್ಲೆಯಲ್ಲೂ ಇರದ ಕಂದಾಯವನ್ನು ಬಡವರ ಮೇಲೆ ಏರುತ್ತಿರುವುದು ಎಷ್ಟು ಸರಿ? ಮೀನು ಮಾರುಕಟ್ಟೆ ಬಳಿ ಕಂದಾಯ ಇಲಾಖೆ ಅಧಿಕಾರಿಗಳೇ ಇದು ಅಕ್ರಮ ಕಟ್ಟಡ ಎಂದು ತಿಳಿಸಿದ್ದರೂ ಪುರಸಭೆ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಶಾಸಕ ಎಚ್.ಕೆ ಸುರೇಶ್ ಮಾತನಾಡಿ, ನನ್ನ ಅವಧಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಮಾಡುವವರಿಗೆ ಅವಕಾಶ ಇಲ್ಲ. ನಾನು ಅಧಿಕಾರಿಗಳನ್ನು ಅಂತಹ ಕೆಲಸ ಮಾಡಿದಾಗ ನೇರವಾಗಿ ಖಂಡಿಸುತ್ತೇನೆ. ನನಗೆ ಇಲ್ಲಿ ಸಾರ್ವಜನಿಕರ ಹಿತ ಮುಖ್ಯ. ಭ್ರಷ್ಟಾಚಾರದಲ್ಲಿ ಯಾರೇ ಭಾಗಿಯಾಗಿದ್ದರು ಅವರನ್ನು ನಾನು ಮಟ್ಟಹಾಕದೆ ಬಿಡುವುದಿಲ್ಲ. 23 ಸದಸ್ಯರು ನಮಗೆ ಸಹಕಾರ ನೀಡಿ. ಅಭಿವೃದ್ಧಿ ಜತೆಗೆ ಏನು ಭ್ರಷ್ಟಾಚಾರ ಆಗಿದೆ? ಯಾರ ಕಾಲದಲ್ಲಿ ಆಗಿದೆ ಎಂದು ನೀವೆಲ್ಲರೂ ತಿಳಿಸಿದರೆ ಅವರ ವಿರುದ್ಧ ಲೋಕಾಯುಕ್ತ ಹಾಗೂ ಉನ್ನತ ತನಿಖೆ ಮಾಡಿಸಲು ಸಿದ್ಧ. ನಾನು ಒಬ್ಬ ಸೇವಕನಾಗಿ ಬಂದಿದ್ದೇನೆ. ನಿಮ್ಮ ಅವಧಿ ಇರುವಷ್ಟು ದಿನ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಿದರೆ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರಲು ಸಿದ್ಧ ಎಂದರು.

ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜು ಕಾಟಪ್ಪ ಶಿಗ್ಗಾವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net