

ಬೆಳಗಾವಿ: ಲಿಂಗತ್ವ ಅಲ್ಪಸಂಖ್ಯಾತರು ಸುಶಿಕ್ಷಿತರಾಗುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಉಪಆಯುಕ್ತ ರವಿ ಕೋಟಾರಗಸ್ತಿ ಹೇಳಿದರು. ನಗರದ ಕುಮಾರಗಂಧರ್ವ ಕಲಾಮಂದಿರದಲ್ಲಿ ಸಂವಿಧಾನ ಸಾಥಿ, ಹುಮ್ಯಾನಿಟಿ ೌಂಡೇಷನ್, ಸಂವಾದ ೆಲೋಷಿಪ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಜಾಗೃತಿ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೀಳರಿಮೆ ಬಿಟ್ಟು ಸತತ ಓದಿದ ಪರಿಣಾಮ ತೃತೀಯ ಲಿಂಗಿಗಳು ಇಂದು ಉನ್ನತ ಹುದ್ದೆ ಪಡೆಯುತ್ತಿದ್ದಾರೆ. ಇನ್ನುಳಿದವರಿಗೂ ಇದು ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಮುಖ್ಯಅತಿಥಿ ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಮಾತನಾಡಿ, ಬದುಕುವ ದಾರಿಗಳು ಸಾಕಷ್ಟು. ನಿರಾಶಾಭಾವದಿಂದ ಹೊರಬಂದು ಉತ್ತಮ ದಾರಿ ಆಯ್ದುಕೊಳ್ಳಬೇಕು. ಗೌರವಯುತ ಜೀವನ ನಡೆಸುವ ಅವಕಾಶ ಮಾಡಿಕೊಟ್ಟ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬಾಸಾಹೇಬ ಕಾಂಬಳೆ ಮಾತನಾಡಿ, ಮೂಢನಂಬಿಕೆಗಳನ್ನು ತ್ಯಜಿಸಬೇಕು. ಸಂವಿಧಾನದ ಆಶಯಗಳನ್ನು ಅರಿತು ನಡೆದರೆ ಜೀವನದಲ್ಲಿ ಯಶಸ್ಸು ಖಚಿತ ಎಂದರು. ಸಂಗಮ ಸಂಸ್ಥೆ ನಿರ್ದೇಶಕ ರಾಜೇಶ ಶ್ರೀನಿವಾಸ, ದಲಿತ ಮತ್ತು ಮೈನಾರಿಟಿ ಸೇನೆ ಜಿಲ್ಲಾಧ್ಯಕ್ಷ ಉಮರಖಾನ್ ಚಪ್ಪರಬಂದ್, ಹುಮ್ಯಾನಿಟಿ ೌಂಡೇಶನ್ ಸಂಸ್ಥಾಪಕ ತಾನಾಜಿ ಸಾವಂತ್, ಯುವಸಾಹಿತಿ ಬಸವರಾಜ ತಳವಾರ ಮಾತನಾಡಿದರು. ಲಿಂಗತ್ವ ಮತ್ತು ಲೈಂಗಿಕ ಬಹುತ್ವ ಚಳುವಳಿ ಅಧ್ಯಕ್ಷೆ ವೈಶಾಲಿ ಬ್ಯಾಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿನೋದ ಸಪ್ಪನ್ನವರ ನಿರೂಪಿಸಿದರು.