

ಬಳ್ಳಾರಿ: ಮಹಿಳಾ ಸಬಲೀಕರಣಕ್ಕೆ ಲಿಂಗ ತಾರತಮ್ಯ ಅಡ್ಡಿಯಾಗಿದೆ. ಮಹಿಳಾ ಸಬಲೀಕರಣಕ್ಕೆ ಪ್ರಾಶಸ್ತ್ಯ ಸಿಕ್ಕರೂ ತಾರತಮ್ಯ ಕೊನೆಗೊಂಡಿಲ್ಲ ಎಂದು ಪ್ರಸೂತಿ ತಜ್ಞೆ ಡಾ.ಜ್ಯೋತಿ ಅರವಿಂದ ಪಟೇಲ್ ಅಭಿಪ್ರಾಯಪಟ್ಟರು.
ನಗರದ ವೀರಶೈವ ಕಾಲೇಜಿನಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಜ್ಞಾನದಲ್ಲಿ ಮಹಿಳೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚದ ಒಟ್ಟು ವಿಜ್ಞಾನಿಗಳಲ್ಲಿ ಶೇ.30 ಮಹಿಳೆಯರಿದ್ದಾರೆ. ಮಹಿಳೆಯರ ಕುರಿತು ಪೂರ್ವಗ್ರಹ ಇದಕ್ಕೆ ಕಾರಣ. ಪುರುಷರಿಗೆ ಸಮಾನವಾದ ಅವಕಾಶಗಳು ಎಲ್ಲ ಕ್ಷೇತ್ರಗಳಲ್ಲಿ ಲಭ್ಯ ಇವೆ. ಕಾರಣಾಂತರಗಳಿಂದ ಈ ಅವಕಾಶಗಳನ್ನು ಬಳಸಿಕೊಳ್ಳಲು ಮಹಿಳೆಯರು ಮುಂದೆ ಬರುತ್ತಿಲ್ಲ. ಮಹಿಳೆಯರು ವ್ಯವಸ್ಥೆಯ ಭಾಗವಾಗುವ ಮೂಲಕ ಸ್ವಾಭಾವಿಕವಾಗಿ ಸಿಗುವ ಹಕ್ಕುಗಳನ್ನು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಮಹಿಳೆಯರು ವಿಜ್ಞಾನ, ವೈದ್ಯಕೀಯ ಹಾಗೂ ತಂತ್ರಜ್ಞಾನ ವಿಷಯದ ಬಗ್ಗೆ ವ್ಯಾಸಂಗ ಮಾಡಲು ಆಸಕ್ತಿ ತೋರಬೇಕೆಂದು ಡಾ.ಜ್ಯೋತಿ ಅರವಿಂದ ಪಟೇಲ್ ಸಲಹೆ ನೀಡಿದರು. ಪ್ರಾಚಾರ್ಯ ಜಿ.ರಾಜಶೇಖರ್ ಇತರರಿದ್ದರು.