ಜೆಮ್ ಪೋರ್ಟಲ್ ಮರೆತ ನಗರಸಭೆ ಸೂಜಿಯಿಂದ ಜೆಸಿಬಿವರೆಗೂ ಲಭ್ಯ

Gadag muncipal
Published on

ಶಿವಾನಂದ ಹಿರೇಮಠ ಗದಗ
ಸರ್ಕಾರಿ ವ್ಯವಸ್ಥೆಯಲ್ಲಿ ಆರ್ಥಿಕ ಸಂಪನ್ಮೂಲ ಸೋರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಜಾರಿ ತಂದ ‘ಜೆಮ್ ಪೊರ್ಟಲ್’(ಜಿಇಎಂ: ಸರ್ಕಾರಿ ಇ ಮಾರ್ಕೆಟ್) ವ್ಯವಸ್ಥೆಯನ್ನು ಗದಗ ನಗರಸಭೆ ಮರೆತಂತೆ ಕಾಣುತ್ತಿದೆ.

ಈ ಮಧ್ಯೆ ಇತ್ತೀಚೆಗೆ ನಡೆದ ಸಾಮಾನ್ಯ ಸಭೆ ಮತ್ತು ತುರ್ತು ಸಭೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಮತ್ತು ಅವುಗಳ ದರಪಟ್ಟಿ ನಿಗದಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ.

ಹಲವು ಖರೀದಿ ಪ್ರಕ್ರಿಯೆಯಲ್ಲಿ ಈಗಾಗಲೇ ಭ್ರಷ್ಟಾಚಾರದ ವಾಸನೆ ಪಸರಿಸಿದ್ದು, ಕೇಂದ್ರ ಸರ್ಕಾರ ಜಾರಿ ತಂದ ‘ಜೆಮ್ ಪೋರ್ಟಲ್’ ನಿಯಮಗಳನ್ನು ಗದಗ ನಗರಸಭೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ.


ಏನಿದು ಜೆಮ್ ಪೊರ್ಟ್‌ಲ್

ಸರ್ಕಾರಿ ಕಚೇರಿ ನಿರ್ವಹಣೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಅಗತ್ಯವಿರುವ ಸಾಮಗ್ರಿಗಳನ್ನು ನೇರವಾಗಿ ಕೇಂದ್ರ ಸರ್ಕಾರ ನಿಯೋಜಿತ ಸಂಸ್ಥೆಗಳಿಂದಲೇ ಖರೀದಿ ಮಾಡಲು 2016ರಲ್ಲೇ ಆನ್‌ಲೈನ್ ವೇದಿಕೆ ಒದಗಿಸಿದೆ.

ಈ ಆನ್‌ಲೈನ್ ವೇದಿಕೆಯೇ ಜೆಮ್ ಪೋರ್ಟಲ್. ಖಾಸಗಿ ಆನ್‌ಲೈನ್ ಮಾರುಕಟ್ಟೆಯಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ನಗರಸಭೆ, ಜಿಪಂ ಹಾಗೂ ಜಿಲ್ಲಾಡಳಿತದಲ್ಲಿ ಒಂದು ಸೂಜಿಯಿಂದ ಜೆಸಿಬಿವರೆಗೂ ಸಾಮಗ್ರಿ, ಯಂತ್ರೋಪಕರಣಗಳನ್ನು ಸ್ಪರ್ಧಾತ್ಮಕ ಬೆಲೆಗೆ ಖರೀದಿಸಬಹುದು.

ಈ ವ್ಯವಸ್ಥೆಯಲ್ಲಿ ಟೆಂಡರ್ ಪ್ರಕ್ರಿಯೆ, ಕೊಟೇಷನ್ ಸಲ್ಲಿಕೆಗೆ ಅವಕಾಶವಿಲ್ಲ ಮತ್ತು ಈ ಪೋರ್ಟಲ್ ಮೂಲಕ ಖರೀದಿಯನ್ನು ರಾಜ್ಯ ಸರ್ಕಾರಿ ಲೆಕ್ಕಪರಿಶೋಧಕರು ಮಾನ್ಯತೆ ನೀಡುತ್ತಾರೆ.
ಅಕ್ರಮವೇನು?: ಜೆಮ್ ಪೋರ್ಟಲ್ ವ್ಯವಸ್ಥೆ ಅಳವಡಿಸಿಕೊಳ್ಳದ ಗದಗ ನಗರಸಭೆಯು ಪ್ರತಿ ಕಾಮಗಾರಿ, ದರಪಟ್ಟಿ ನಿಗದಿಪಡಿಸುವುದು ಮತ್ತು ವಸ್ತುಗಳ ಖರೀದಿಗೆ ಟೆಂಡರ್, ಕೊಟೇಷನ್ ಮೂಲಕವೇ ವ್ಯವಹರಿಸುತ್ತದೆ.

ಇದರಿಂದ ನಕಲಿ ಕೊಟೇಷನ್‌ಗಳು ಸಲ್ಲಿಕೆ ಆಗುವ ಮತ್ತು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ವಸ್ತು ಖರೀದಿಯಾಗುವ, ಮತ್ತು ಗುಣಮಟ್ಟ ಇಲ್ಲದ ಸಾಮಗ್ರಿ ಖರೀದಿ ಮಾಡಿ ಭ್ರಷ್ಟಾಚಾರ ಎಸಗುವ ಸಂಭವ ಹೆಚ್ಚಾಗಿರುತ್ತದೆ.


ಸಾಮಾನ್ಯ ಸಭೆಯಲ್ಲಿ ನಗರಸಭೆ ಮಾಡಿದ್ದೇನು?: 15ನೇ ಹಣಕಾಸು, ಎಸ್‌ಎ್ಸಿ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆ ಅನುದಾನದಲ್ಲಿ ಜೆಸಿಬಿ, ಮಿನಿಎಸ್ಕಾೃವೇಟರ್, ಸ್ಕೀಡ್ ಸ್ಟೇರ್ ಲೋಡರ್, ಡಿಸ್ಟಿಲಿಂಗ್ ಮಷಿನ್, 8000 ಲೀಟರ್ ಸಕ್ಷನ್ ಕಮ್ ಜೆಟ್ಟಿಂಗ್ ವಾಹನ್, ಕನ್ವೆರ್ ಬೆಲ್ಟ್, ಕಾಮನ್ ೆಸಿಲಿಟಿ ಸಲಕರಣೆಗಳ ಖರೀದಿಗೆ ಟೆಂಡರ್ ದರವಾರು ಪಟ್ಟಿಗೆ ಸಾಮಾನ್ಯ ಸಭೆಯಲ್ಲಿ ದರ ಅನುಮೋದನೆ ನೀಡಿದೆ.

ಮುಂದುವರಿದು ಟೆಂಡರ್ ಕರೆದು ಅನುಮೋದನೆ ನೀಡಲಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಮಾರುಕಟ್ಟೆ ದರಕ್ಕಿಂತಲೂ ಅಧಿಕ ದರವನ್ನು ಗುತ್ತಿಗೆದಾರ ನಮೂದಿಸಿ ಟೆಂಡರ್ ಪಡೆಯುವ ಅವಕಾಶ ಹೆಚ್ಚು. ಆತ್ಮೀಯರಿಗೆ ಟೆಂಡರ್ ದೊರೆತು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಸೋರಿಕೆ ಆಗುತ್ತದೆ.

ಈ ವ್ಯವಸ್ಥೆ ಬದಲಾಗಿದೆ. ಜೆಮ್ ಪೊರ್ಟಲ್ ಮೂಲಕ ಅಗತ್ಯವಿರುವ ಸಾಮಗ್ರಿಗಳನ್ನು ಸ್ಪರ್ಧಾತ್ಮಕ ಬೆಲೆಗೆ ನಗರಸಭೆ ಖರೀದಿ ಮಾಡಬಹುದು ಮತ್ತು ವ್ಯವಹಾರ ಪಾರದರ್ಶಕ ಇರುತ್ತದೆ.


ತುರ್ತು ಸಭೆಯಲ್ಲಿ ಜರುಗಿದ್ದೇನು?: ನಗರದ ಪ್ರತಿ ವಾರ್ಡ್‌ಗೆ ನೀರಿನ ಸೌಕರ್ಯ ಕಲ್ಪಿಸಲು ತಲಾ 4.43 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಮತ್ತು ಕೊಳವೆ ಬಾವಿಗೆ 2ರಿಂದ 5 ಎಚ್‌ಪಿ ಮೋಟಾರ್ ಅಳವಡಿಕೆ ಕ್ರಿಯಾ ಯೋಜನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ.

ಈ ಯೋಜನೆಗೆ ಸಂಬಂಧಿಸಿದ ಹಲವು ಸಾಮಗ್ರಿಗಳು ಜೆಮ್ ಪೊರ್ಟಲ್‌ನಲ್ಲಿ ಲಭ್ಯವಿದ್ದು, ನೇರವಾಗಿ ಖರೀದಿಸಿ ಪಾರದರ್ಶಕ ಆಡಳಿತವನ್ನು ನಗರಸಭೆ ನೀಡಬಹುದು.


4.83 ಲಕ್ಷಕ್ಕೂ ಅಧಿಕ ಉತ್ಪನ್ನ ಲಭ್ಯ

ಜೆಮ್ ಪೊರ್ಟಲ್ ನಲ್ಲಿ 25 ಸಾವಿರದಿಂದ 5 ಲಕ್ಷ ರೂ. ವರೆಗೆ ಎಲ್ಲ ವಸ್ತುಗಳನ್ನು ಖರೀದಿಸಬಹುದು. 98000ಕ್ಕೂ ಹೆಚ್ಚು ಮಾದರಿಯ, 4.83 ಲಕ್ಷಕ್ಕೂ ಅಧಿಕ ಉತ್ಪನ್ನಗಳು ಪೋರ್ಟಲ್ ನಲ್ಲಿ ಲಭ್ಯ. ಸರ್ಕಾರದಿಂದ ಮಾನ್ಯತೆ ಪಡೆದ 38 ಲಕ್ಷ ಎಲ್ಲ ರೀತಿಯ ಉತ್ಪನ್ನಗಳ ಮಾರಾಟಗಾರರು ಪೊರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ. ರ್ನಿಚರ್, ಪೆನ್, ಬುಕ್, ಟೇಬಲ್, ಪೇಂಟ್, ಪೈಪ್‌ಗಳು, ಫ್ಲಂಬಿಂಗ್ ಸಲಕರಣೆ, ವಿದ್ಯುತ್ ದೀಪಗಳು, ಆಕ್ಸಿಜನ್ ಸಿಲೆಂಡರ್, ವಾಹನಗಳು, ಸ್ಯಾನಿಟೈಸರ್ ಲಭ್ಯ. ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಖರೀದಿಸಬಹುದು.


ಅನುಕೂಲವೇನು?
ನಗರಸಭೆಯಲ್ಲಿ ನಕಲಿ ಕೊಟೇಷನ್, ಬಿಲ್ ಸೃಷ್ಟಿಗೆ ಕಡಿವಾಣ
ಭ್ರಷ್ಟಾಚಾರ, ಸಂಪನ್ಮೂಲ ಸೋರಿಕೆಗೆ ನಿಯಂತ್ರಣ
ಅನಗತ್ಯ ಟೆಂಡರ್, ಟೆಂಡರ್ ವಿಳಂಬಕ್ಕೆ ಕಡಿವಾಣ
ಪಾರದರ್ಶಕ ಬೆಲೆಗೆ ವಸ್ತುಗಳ ಖರೀದಿ,
ಸರ್ಕಾರಿ ಆರ್ಥಿಕ ಸಂಪನ್ಮೂಲ ನಿಯಂತ್ರಣ.

ಟೆಂಡರ್ ಮೂಲಕವೇ ಯಾವುದೇ ಖರಿದಿಗೆ ಅನುಮತಿ ನೀಡುವ ಸಂಪ್ರದಾಯ ಬಳಕೆಯಲ್ಲಿದೆ. ಜೆಮ್ ಪೋರ್ಟಲ್ ಬಳಸುವುದರಿಂದ ತಾಂತ್ರಿಕ ತೊಡಕು ಉದ್ಭವ ಆಗುವ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು. - ಉಷಾ ದಾಸರ ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net