

ಈಶ್ವರಮಂಗಲ: ಸಾಮಾಜಿಕ ಪರಿವರ್ತನೆಗೆ ಎರಡು ದಾರಿಯಿದೆ. ತಾಳ್ಮೆ, ಸಹನೆ ಮೂಲಕ ಒಂದು ದಾರಿಯಾದರೆ ಮತ್ತೊಂದು ಅಸಹನೆಯ ದಾರಿಯಾಗಿದೆ. ಧರ್ಮ, ನ್ಯಾಯ, ಸತ್ಯ, ಪ್ರೀತಿಯಿಂದ ಮನಸ್ಸು ಪರಿವರ್ತನೆಯಾದರೆ ಮಾತ್ರ ಅದು ಶಾಶ್ವತ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ದೇಯಿ ಬೈದ್ಯೆತಿ, ಕೋಟಿ- ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನಬಿತ್ತ್‌ಲ್‌ನಲ್ಲಿ ಬ್ರಹ್ಮಕಲಶೋತ್ಸವದ ಆರನೇ ದಿನವಾದ ಶನಿವಾರ ರಾತ್ರಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧರ್ಮ ಸ್ಥಾಪನೆ ಮತ್ತು ರಾಮ ರಾಜ್ಯದ ಕಲ್ಪನೆ ಸಹನೆ, ಸಹಬಾಳ್ವೆ, ಭ್ರಾತೃತ್ವದ ಮೂಲಕ ಆಗಬೇಕು. ಸಮಾನ ನ್ಯಾಯಕ್ಕಾಗಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದವರು ಬ್ರಹ್ಮಶ್ರೀ ನಾರಾಯಣಗುರುಗಳು. ಸತ್ಯ-ಧರ್ಮಕ್ಕಾಗಿ ಹೋರಾಡಿದವರು ಕೋಟಿ-ಚೆನ್ನಯರು. ಕೋಟಿ-ಚೆನ್ನಯರರಲ್ಲಿ ಕೋಟಿ ತಾಳ್ಮೆ ಮತ್ತು ಸಹನೆಯ ಮೂರ್ತಿಯಾದರೆ ಚೆನ್ನಯ ಅಸಹನೆಯ ಮೂರ್ತಿ. ಹಾಗೆಂದು ಕೋಟಿ ದುರ್ಬಲ ಅಲ್ಲ. ಜಿಲ್ಲೆಯಲ್ಲಿ ಕೋಟಿ ಚೆನ್ನಯರ ವಿಚಾರ ಗೊತ್ತಿಲ್ಲದವರು ಜಿಲ್ಲೆಯವರೇ ಅಲ್ಲ. ಒಂದು ಸಮಾಜ ಒಟ್ಟಾದರೆ ಏನಾಗುತ್ತದೆ ಎಂಬುದನ್ನು ತೋರಿಸಿ ಕೊಡುವ ಕೆಲಸ ಗೆಜ್ಜೆಗಿರಿಯಲ್ಲಿ ನಡೆದಿದೆ. ಇಡೀ ಜಿಲ್ಲೆಯಲ್ಲಿ ದೇಯಿ ಬೈದ್ಯೆತಿ, ಕೋಟಿ ಚೆನ್ನಯರ ಬಗ್ಗೆ ಮನೆಮನೆಯಲ್ಲಿ ಮಾತಾಡುವಂತಾಗಿದೆ ಎಂದರು.
ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ‌್ಯಕ್ರಮ ಉದ್ಘಾಟಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಗಿರಿ ನಂದನ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಾಸಕರಾದ ಸಂಜೀವ ಮಠಂದೂರು, ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಆಕಾಶವಾಣಿ ನಿರ್ದೇಶಕ ಡಾ.ಸದಾನಂದ ಪೆರ್ಲ, ಮುಂಬೈ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು. ಶಿಲಾ ಸ್ತಪತಿಗಳಾದ ಲಮಾಣಿ ಕುಬೇರಪ್ಪ ಹಾಗೂ ಕುಪ್ಪ ಸ್ವಾಮಿ ಅವರನ್ನು ಗೌರವಿಸಲಾಯಿತು. ಉದ್ಯಮಿ ಊರ್ಮಿಳಾ ರಮೇಶ್ ಕುಮಾರ್, ಬಡಗನ್ನೂರು ಗ್ರಾಪಂ ಅಧ್ಯಕ್ಷ ಕೇಶವ ಗೌಡ ಕನ್ನಯ, ಚಲನಚಿತ್ರ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ಕತಾರ್ ಬಿಲ್ಲವ ಸಂಘದ ಅಧ್ಯಕ್ಷ ರಘುನಾಥ ಅಂಚನ್, ಸೌದಿ ಅರೇಬಿಯಾ ಬಿಲ್ಲವ ಸಂಘದ ಸ್ಥಾಪಾಕಾಧ್ಯಕ್ಷ ಪ್ರಕಾಶ್ ಪೂಜಾರಿ, ಮಂಗಳೂರು ಮಹಿಳಾ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷೆ ಸುಜಿತಾ ವಿ.ಬಂಗೇರ, ದುಬೈ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸತೀಶ ಪೂಜಾರಿ, ಮಂಗಳೂರಿನ ವಕೀಲ ಅರುಣ್ ಬಂಗೇರ, ದಿವಾಕರ ಪೂಜಾರಿ ಕತಾರ್, ಮುಂಬೈ ಭಾರತ್ ಬ್ಯಾಂಕ್ ನಿರ್ದೇಶಕ ಪುರುಷೋತ್ತಮ ಕೋಟ್ಯಾನ್, ಉಡುಪಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ, ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಸುಚಿತ ಬಂಗೇರ ಬೆಳ್ತಂಗಡಿ ಅತಿಥಿಗಳಾಗಿದ್ದರು. ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ರವೀಂದ್ರ ಸುವರ್ಣ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ಸ್ವಯಂಸೇವಕ ಸಮಿತಿ ಪ್ರಧಾನ ಸಂಚಾಲಕ ನಾರಾಯಣ ಮಚ್ಚಿನ, ಉಗ್ರಾಣ ಸಮಿತಿ ಪ್ರಧಾನ ಸಂಚಾಲಕ ಜಯಂತ ಕೆಂಗುಡೇಲು, ಹೊರೆಕಾಣಿಕೆ ಸಮಿತಿ ಸಂಚಾಲಕ ರವಿ ಕಕ್ಕೆಪದವು ಮತ್ತಿತರರಿದ್ದರು. ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಸಂತೋಷ್ ಕುಮಾರ್ ಕೊಟ್ಟಿಂಜ ಸ್ವಾಗತಿಸಿದರು. ಪ್ರವೀಣ್ ಕೆಡೆಂಜಿಗುತ್ತು ಪ್ರಾಸ್ತಾವಿಕ ಮಾತನಾಡಿದರು. ಅಜಿತ್ ಮಾಲೇರಿ ವಂದಿಸಿದರು. ಉಪನ್ಯಾಸಕ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಭಾರತದ ಮೂಲ ಸತ್ವವಿದೆ. ಜಾನಪದೀಯ ವೈದ್ಯಕೀಯವನ್ನು ಉಳಿಸುವ ಕೆಲಸ ಆಗಬೇಕು. ಜಾನಪದೀಯ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಆಗಬೇಕು. ಜಾನಪದೀಯ ಔಷಧವನ್ನು ಉಳಿಸುವ ಜತೆಗೆ ಅದರ ಸಂಶೋಧನೆ ಮಾಡುವ ಕೆಲಸ ಗೆಜ್ಜೆಗಿರಿಯಲ್ಲಿ ಆಗಬೇಕು. ಡಾ.ಡಿ.ವಿರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ