ಮುದ ನೀಡುವ ಸಾಹಿತ್ಯದ ಓದು-ಬರಹ: ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಅಭಿಪ್ರಾಯ

'Geethankura' book release in Taggahalli village mandya
Published on

ಮಂಡ್ಯ: ಸಾಹಿತ್ಯ ಎಂಬುದು ಜೇನಿನ ಹನಿ ಇದ್ದಂತೆ. ಹೇಗೆ ಜೇನುತುಪ್ಪ ಸಿಹಿಯನ್ನು ನೀಡಿ ಔಷಧವಾಗಿ ಕೆಲಸ ನಿರ್ವಹಿಸುವುದೋ, ಅದೇ ರೀತಿ ಸಾಹಿತ್ಯದ ಓದು ಮತ್ತು ಬರಹ ನಮಗೆ ಮುದ ನೀಡುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಅಭಿಪ್ರಾಯಪಟ್ಟರು.

ತಾಲೂಕಿನ ತಗ್ಗಹಳ್ಳಿ ಗ್ರಾಮದ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ಕವಿ ಸಬ್ಬನಹಳ್ಳಿ ಶಶಿಧರ ಅವರ 17ನೇ ಕೃತಿ ‘ಗೀತಾಂಕುರ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಹಿಂದೆ ನಮ್ಮ ಮನೆಗಳಲ್ಲಿ ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಸಾಧಕರು, ಕವಿ-ಲೇಖಕರ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದೆವು. ಬದಲಾಗಿ ಈಗ ಮಾತ್ರೆಗಳನ್ನು ಇಟ್ಟುಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.

ಕಾಲದ ಮಹಿಮೆ ಎಂಬಂತೆ ಇಂದು ನಾವು ಓದು-ಬರಹಗಳಿಂದ ದೂರವಾಗಿದ್ದೇವೆ. ಹಾಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದೇವೆ. ‘ಗೀತಾಂಕುರ’ ಕೃತಿಕಾರನ ಮೊದಲ ಕವನ ಸಂಕಲನವಾಗಿದ್ದು, ಉತ್ತಮ ಶೀರ್ಷಿಕೆ. ಅವರ ಕಾವ್ಯ ಜಗತ್ತಿನ ಅಂಕುರವಾಗಿದೆ. 17 ಕೃತಿ ರಚಿಸಿ ನಮ್ಮ ಜಿಲ್ಲೆಯ ಅತಿದೊಡ್ಡ ಸಾಹಿತ್ಯದ ಆಸ್ತಿಯಾಗಿದ್ದಾರೆ. ಶೇ. 75ರಷ್ಟು ಪ್ರೇಮ ಕವಿತೆಗಳನ್ನು ಒಳಗೊಂಡಿರುವ ಗೀತಾಂಕುರ ಒಂದು ಒಳ್ಳೆಯ ಕವನ ಸಂಕಲನ ಎಂದು ತಿಳಿಸಿದರು.

ಕೃತಿ ಬಿಡುಗಡೆ ಮಾಡಿದ ಶಿಕ್ಷಕ ಶಿವಣ್ಣ ಮಂಗಲ ಮಾತನಾಡಿ, ಕೃತಿಕಾರ ಸಬ್ಬನಹಳ್ಳಿ ಶಶಿಧರ ಅವರು ಸ್ನೇಹ ಜೀವಿ. ತಮ್ಮ ವೈಯಕ್ತಿಕ ಚಟುವಟಿಕೆಗಳಲ್ಲಿ ಸ್ನೇಹಿತರಿಗೇ ಆದ್ಯತೆ ನೀಡುತ್ತಾರೆ. ಹಾಗಾಗಿ ಕೃತಿ ಬಿಡುಗಡೆಯನ್ನು ಸ್ನೇಹಿತರ ಸಮ್ಮುಖದಲ್ಲಿ ಆಯೋಜಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರು ಯಾವುದಾದರೂ ಒಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಆಳವಾದ ಅಧ್ಯಯನದೊಂದಿಗೆ ಉತ್ತಮ ಕೊಡುಗೆ ನೀಡಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೇಖಕಿ ಡಾ.ಕನ್ನಿಕಾ ಶಿಲ್ಪಾ, ನನ್ನ ಸಾಹಿತ್ಯದ ಓದು, ಕೃತಿಗಳ ರಚನೆಗೆ ಸದಾ ಹುರಿದುಂಬಿಸುತ್ತಿರುವ ಸಬ್ಬನಹಳ್ಳಿ ಶಶಿಧರ ಅವರೇ ನಾನು 19 ಕೃತಿಗಳನ್ನು ಪ್ರಕಟಿಸಲು ಚೈತನ್ಯ. ನೇರ, ದಿಟ್ಟ, ನಿರಂತರ ಎಂಬಂತಹ ವ್ಯಕ್ತಿತ್ವ ಅವರದ್ದು. ಮಂಡ್ಯ ಜಿಲ್ಲಾ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚಿಸಿರುವ ಬಹುಮುಖ ಪ್ರತಿಭೆ ಸಬ್ಬನಹಳ್ಳಿ ಶಶಿಧರ ಅವರು ತಮ್ಮ ಕಾರ್ಯಸ್ಥಾನದಲ್ಲಿ, ಅದರಲ್ಲೂ ಗ್ರಾಮೀಣ ಪರಿಸರದಲ್ಲಿ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹ. ಈ ನಿಟ್ಟಿನಲ್ಲಿ ಲೇಖಕರು, ಸಾಹಿತಿಗಳು, ಉಪನ್ಯಾಸಕರು ಹಾಗೂ ಸಾಧಕರನ್ನು ಕರೆಯಿಸಿ ತಮ್ಮ ಕೃತಿಯ ಮೂಲಕ ಜ್ಞಾನ ದಾಸೋಹ ನಡೆಸುತ್ತಿರುವುದು ಮಾದರಿಯಾದದ್ದು ಎಂದು ಶ್ಲಾಘಿಸಿದರು.

ಉಪನ್ಯಾಸಕ ಎಂ.ಮಂಚಶೆಟ್ಟಿ ಮಾತನಾಡಿದರು. ಸಂಘಟಕ ಧನಂಜಯ ಜಿ.ದರಸಗುಪ್ಪೆ, ಹಿಂದಿ ಶಿಕ್ಷಕ ಪ್ರಸನ್ನ, ಕವಿಯತ್ರಿ ರೇಖಾ ಶಶಿಧರ, ಕುಮಾರ ಸಬ್ಬನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net