

ಮಂಡ್ಯ: ಸಾಂಸ್ಕೃತಿಕ ಪ್ರಪಂಚದ ಕಲಾದಿಗ್ಗಜರು ಚಿರಂಜೀವಿಗಳಾಗಿ ಯಾವಾಗಲೂ ನಮ್ಮೊಡನೆ ಬದುಕಿರುತ್ತಾರೆ ಎಂದು ಭಾರತ ಸೇವಾದಳದ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿ.ವಿ.ನಾಗರಾಜು ಹೇಳಿದರು.
ನಗರದ ಸೇವಾಕಿರಣ ವೃದ್ಧಾಶ್ರಮದ ಸಭಾಂಗಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಆಕಾಡೆಮಿ ಆಯೋಜಿಸಿದ್ದ ಕನ್ನಡದ ಮೊದಲ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗೀತನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಗಮಸಂಗೀತ ಕ್ಷೇತ್ರದಲ್ಲಿ ಡಾ.ಶಿವಮೊಗ್ಗ ಸುಬ್ಬಣ್ಣ ಅವರ ಹೆಸರು ಅದ್ವಿತೀಯವಾಗಿದೆ, ಕನ್ನಡ ಸುಗಮಸಂಗೀತ ಲೋಕದ ನಕ್ಷತ್ರವಾಗಿ ಬೆಳೆದು ಕನ್ನಡತನವನ್ನು ವಿದೇಶಗಳಲ್ಲೂ ಬೆಳೆಸಿದ್ದಾರೆ. ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಚಿರಂಜೀವಿಯಾಗಿ ನಮ್ಮೊಡನೆ ಬದುಕಿದ್ದಾರೆ. ಕಲಾವಿದರಿಗೆ ಸಾವಿಲ್ಲ ಎಂದು ಸ್ಮರಿಸಿದರು.
ಡಾ.ಶಿವಮೊಗ್ಗ ಸುಬ್ಬಣ್ಣ ಅವರನ್ನು ಮಂಡ್ಯಕ್ಕೆ ಕರೆಸಿ ಅವರ ಹಾಡುಗಳನ್ನು ಕೇಳಿಸಿದ ಕೀರ್ತಿ ಸಂಘಟಕರಿಗೆ ಸಲ್ಲುತ್ತದೆ. ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ ಕಾರ್ಯಕ್ರಮಗಳು, ಮಹಿಳಾ ಕಾಲೇಜಿಗೆ ಭೇಟಿ ನೀಡಿ ಹಾಡುಗಳನ್ನು ಹಾಡಿದ ವೈಭವ ಮರೆಯಲಾಗದು ಎಂದು ನುಡಿದರು.
ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ ಹನುಮಂತು, ಪ್ರೊ.ಡೇವಿಡ್, ಧನ್ಯಾ, ದೀಕ್ಷಾ ಜೈನ್, ಸಿಂಧು, ನೇತ್ರಾವತಿ, ಸಿಂಚಿನ, ಮೇಹೆತ್ ಇತರರಿದ್ದರು.