

ಮಡಿಕೇರಿ:
ಭಗತ್‌ಸಿಂಗ್ ಯುವಕ ಸಂಘ ಅಯೋಜಿಸಿದ ಜಿಸಿಎಲ್ ಐದನೇ ಅವೃತಿಗೆ ಗೋಣಿಕೊಪ್ಪಲು ದಸರಾ ಮೈದಾನದಲ್ಲಿ ಗುರುವಾರ ಆದ್ಧೂರಿ ಚಾಲನೆ ದೊರೆತಿದೆ. ಇಪ್ಪತ್ತು ತಂಡಗಳು ನಾಲ್ಕು ದಿನಗಳ ಕಾಲ ನಡೆಯುವ ಗೋಣಿಕೊಪ್ಪಲು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಭಾಗವಹಿಸಲಿದೆ.
ಪೊನ್ನಂಪೇಟೆ ರಾಮಕೃಷ್ಣ ಶಾರದ ಆಶ್ರಮದ ಅಧ್ಯಕ್ಷ ಪರಹಿತ ನಂದಾಜಿ ಮಹಾರಾಜ್ ಮತ್ತು ಗೋಣಿಕೊಪ್ಪ ಸಂತ ಥೋಮಸ್ ಶಾಲೆಯ ಪ್ರಾಂಶುಪಾಲ ಆಂಟೋನಿ ಪಯ್ಯಪಲ್ಲಿ ಹಾಗೂ ಇತರ ಅತಿಥಿಗಳು ಪಂದ್ಯಾಟಕ್ಕೆ ವರ್ಣರಂಜಿತ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಎಂದು ಸ್ವಾಮಿ ಪರಾಹಿತಾನಂದ ಮಹರಾಜ್ ಏಕಾಗ್ರತೆ ಮೈಗೂಡಿಸಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯುತ್ತಮವಾಗಿದೆ. ದೇವರ ಪ್ರಾರ್ಥನೆಯಿಂದ ಏಕಾಗ್ರತೆ ಸಿಗದಂಥ ಪರಿಸ್ಥಿತಿ ನಿರ್ಮಾಣವಾದರೂ, ಕ್ರೀಡೆಗಳಲ್ಲಿ ಬಾಗವಹಿಸುವುದರಿಂದ ಏಕಾಗ್ರತೆ ಸಿಗಲಿದೆ. ಸ್ವಾಮಿ ವಿವೇಕಾನಂದರು ಈ ಭಾರತ ದೇಶ ಕಟ್ಟಲು ಬಲಿಷ್ಠ ಯುವಕರ ಶಕ್ತಿ ಬೇಕು ಎಂದು ಹೇಳುತ್ತಿದ್ದರು, ಅಂತಹ ಶಕ್ತಿ ಕ್ರೀಡೆಯಿಂದ ಯುವಕರು ಪಡೆದುಕೊಳ್ಳಬಹುದು. ನಮ್ಮ ಶಕ್ತಿ ಬಗ್ಗೆ ನಂಬಿಕೆ ಇರಬೇಕು. ಧ್ಯಾನ ಮತ್ತು ಕ್ರೀಡೆಗಳು ಪರಿಣಾಮಕಾರಿ ಜೀವನವನ್ನು ರೂಪಿಸುತ್ತದೆ ಎಂದರು.
ಆಂಟೋನಿ ಪಯ್ಯಪಲ್ಲಿ ಮಾತನಾಡಿ, ಕ್ರೀಡೆಯಿಂದ ಮನೋಲ್ಲಾಸ ಪಡೆದುಕೊಳ್ಳಲು ಸಾಧ್ಯವಿದೆ. ಯುವಕರು ವ್ಯಸನಗಳಿಗೆ ಬಲಿಯಾಗುವ ಬದಲು ಕ್ರೀಡೆಯಂಥ ಅಭ್ಯಾಸಗಳನ್ನು ಬಳಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಕವಿ ಜಗದೀಶ್ ಜೋಡುಬೀಟಿ ಮಾತನಾಡಿ, ಮನಸ್ಸಿನಲ್ಲಿರುವ ನಕರಾತ್ಮಕ ಅಂಶಗಳನ್ನು ತೆಗೆದು ಏಕಾಗ್ರತೆ, ಮನಸ್ಸನ್ನು ಸಿದ್ದಿಸಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಉಪಯುಕ್ತ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಕಿನ್ನತೆಗಳಿಂದ ಹೊರಬರಲು ಕ್ರೀಡೆಗಳು ಸಹಕಾರಿಯಾಗುತ್ತದೆ. ಆಧ್ಯಾತ್ಮ ಮತ್ತು ಕ್ರೀಡೆ ಎರಡು ಮುಖದ ಒಂದೇ ನಾಣ್ಯಗಳಿದ್ದಂತೆ. ಮನುಷ್ಯನ ನಕರಾತ್ಮಕ ಗುಣಗಳನ್ನು ನಿಯಂತ್ರಿಸಲು ಆಧ್ಯಾತ್ಮಿಕ ಮಾರ್ಗಗಳಿಂದ ಸಾಧ್ಯವಾಗುವಂತೆಯೇ ಕ್ರೀಡೆಗಳಿಂದಲೂ ಸಾಧ್ಯವಾಗಬಲ್ಲದು ಎಂದರು.
ಜಿಸಿಎಲ್ ಕ್ರಿಕೆಟ್ ಪಂದ್ಯಾಟದ ಅಧ್ಯಕ್ಷ ಸ್ನೇಕ್ ಶಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕೆ ಮಂಜುಳಾ, ಸದಸ್ಯ ಬಿ.ಎನ್. ಪ್ರಕಾಶ್, ಜಿ.ಪಂ. ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಹ್ಮಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಕೆ. ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಪೊನ್ನಂಪೇಟೆ ಕೆಪಿಎಸ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಮತ್ತಿತರರು ಇದ್ದರು.