

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಭಾರತೀಯ ಕಾಂಕ್ರೀಟ್ ಸಂಸ್ಥೆ (ಐಸಿಐ) - ಅಲ್ಟ್ರಾಟೆಕ್ ಪ್ರಶಸ್ತಿಗೆ ಭಾಜನವಾಗಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜಿಬಿಎಗೆ ಈ ಪುರಸ್ಕಾರ ವಿತರಿಸಲಾಯಿತು.
ಕೊರಮಂಗಲದ 1ನೇ ಕ್ರಾಸ್ ಎಂಪೈರ್ ರಸ್ತೆ ಮತ್ತು 7ನೇ ಕ್ರಾಸ್ ರಸ್ತೆಗಳಲ್ಲಿ ಅನುಷ್ಠಾನಗೊಳಿಸಲಾದ ಥಿನ್ ವೈಟ್ ಟಾಪಿಂಗ್ (ಟಿಡಬ್ಲ್ಯುಟಿ) ಕಾಮಗಾರಿ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಈ ಗೌರವ ಸಂದಿದೆ.
ಕೊರಮಂಗಲದ ಒಳ ವರ್ತುಲ ರಸ್ತೆಯ (ಐಆರ್‌ಆರ್) 1ನೇ ಕ್ರಾಸ್ ಎಂಪೈರ್ ರಸ್ತೆಯಿಂದ ಗಣಪತಿ ದೇವಸ್ಥಾನದ ವರೆಗೆ 1.1 ಕಿ.ಮೀ. ಹಾಗೂ 7ನೇ ಕ್ರಾಸ್‌ನ ಬಿಡಿಎ ಕಾಂಪ್ಲೆಕ್ಸ್‌ನಿಂದ ವಿಪ್ರೋ ಪಾರ್ಕ್ ಸಿಗ್ನಲ್ ವರೆಗೆ 1.17 ಕಿ.ಮೀ. ಉದ್ದದ ರಸ್ತೆಗೆ ಹೊಸ ವಿನ್ಯಾಸದಲ್ಲಿ 125 ಎಂಎಂ ದಪ್ಪದ ವೈಟ್ ಟಾಪಿಂಗ್‌ಅನ್ನು 2023ರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಸಾಮಾನ್ಯವಾಗಿ ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗಳಿಗೆ 180 ಎಂಎಂ ದಪ್ಪವಿರುವ ವಿನ್ಯಾಸ ಬಳಸಲಾಗುತ್ತಿತ್ತು. ಈಗ ಹೊಸ ಯೋಜನೆಯಲ್ಲಿ ಜಿಬಿಎಯ ಅಭಿಯಂತರರ ತಂಡವು 125 ಎಂಎಂ ದಪ್ಪದ ಹೊಸ ವಿನ್ಯಾಸವನ್ನು ಯಶಸ್ವಿಯಾಗಿ ರೂಪಿಸಿ ಜಾರಿಗೊಳಿಸಿದೆ.
ಥಿನ್ ವೈಟ್ ಟಾಪಿಂಗ್ ವಿನ್ಯಾಸದ ಮುಖ್ಯಶಿಲ್ಪಿ ಜಿಬಿಎ ಮುಖ್ಯ ಅಭಿಯಂತರ ಎಂ. ಲೋಕೇಶ್, ಅಧೀಕ್ಷಕ ಅಭಿಯಂತರ ಕೆ.ಹೇಮಲತಾ, ಕಾರ್ಯಪಾಲಕ ಅಭಿಯಂತರ ಎ.ಸತ್ಯನಾರಾಯಣ ರಾಜು ಹಾಗೂ ಎಇಇ ವೀಣಾ.ಸಿ ಯೋಜನೆ ಜಾರಿ ತಂಡದಲ್ಲಿದ್ದರು.
ಕಾರ್ಯಕ್ರಮದಲ್ಲಿ ಐಸಿಐ (ಬೆಂಗಳೂರು ಕೇಂದ್ರ ವಿಭಾಗ) ಅಧ್ಯಕ್ಷ ಎಚ್.ಆರ್. ಗಿರೀಶ್, ಅಲ್ಟ್ರಾ ಟೆಕ್‌ನ ಪ್ರಾದೇಶಿಕ ಮುಖ್ಯಸ್ಥ (ಮಾರುಕಟ್ಟೆ ವಿಭಾಗ) ರಾಘವೇಂದ್ರ ದೇಸಾಯಿ, ಐಸಿಐ ಕಾರ್ಯದರ್ಶಿ ಡಾ. ಬಿ.ಎಸ್. ಸಂತೋಷ್ ಹಾಜರಿದ್ದರು.
ಇಂಜಿನಿಯರ್‌ಗಳಿಗೆ ಶ್ಲಾಘನೆ:
ಹೊಸ ವಿನ್ಯಾಸದಲ್ಲಿ ರಸ್ತೆ ಅಭಿವೃದ್ಧಿ ಯೋಜನೆ ಜಾರಿ ಮಾಡಿ ಪ್ರಶಸ್ತಿ ಸಂದಿರುವುದಕ್ಕೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಯೋಜನೆ ಅನುಷ್ಠಾನಗೊಳಿಸಿದ ಅಭಿಯಂತರರನ್ನು ಅಭಿನಂದಿಸಿದ್ದಾರೆ.