

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಂಗಡಿಸಿ ಗ್ರೇಟರ್ ಬೆಂಗಳೂರು ಅಡಿ ಹೊಸದಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳು ಮಂಗಳವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದವು. ಇದಕ್ಕೆ ಪೂವಕವಾಗಿ ಆಡಳಿತ ನಡೆಸಲು ಅನುಕೂಲವಾಗುವಂತೆ ಪಾಲಿಕೆಗಳಿಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಮೊದಲ ದಿನ ಸರ್ಕಾರ ವಿವಿಧ ಆದೇಶಗಳನ್ನು ಹೊರಡಿಸಿ ಜಿಬಿಎ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಅವಕಾಶ ಕಲ್ಪಿಸಿತು.
ಜಿಬಿಎ ಕಚೇರಿಯು ಹಿಂದಿನ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಆರಂಭವಾಗಿದ್ದು, ಮುಖ್ಯ ಆಯುಕ್ತ ಎಂ.ವೆಂಕಟೇಶ್ವರ ರಾವ್ ಕಡತಕ್ಕೆ ಸಹಿ ಹಾಕಿ ಹೊಸ ಆಡಳಿತ ವ್ಯವಸ್ಥೆಗೆ ನಾಂದಿ ಹಾಡಿದರು. ಇದರ ಬೆನ್ನಲ್ಲೇ ಸರ್ಕಾರ ಐದೂ ಪಾಲಿಕೆಗಳಿಗೆ ಆಯುಕ್ತರು, ಜಂಟಿ ಆಯುಕ್ತರು ಸೇರಿ ವಿವಿಧ ಸ್ತರದ ಐಎಎಸ್/ಕೆಎಎಸ್ ಅಧಿಕಾರಿಗಳನ್ನು ಆಯಾಕಟ್ಟಿನ ಹುದ್ದೆಗಳಿಗೆ ವರ್ಗಾಯಿಸಿದೆ. ಆದೇಶ ಹೊರಬಿದ್ದ ಬಳಿಕ ಹೆಚ್ಚಿನ ಅಧಿಕಾರಿಗಳು ಸಂಜೆಯೇ ಅಧಿಕಾರ ಸ್ವೀಕರಿಸಿದರು. ಇನ್ನು ಕೆಲವರು ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಹಾಗೂ 2025ರ ತಿದ್ದುಪಡಿ ರೂಪದ ಕಾಯ್ದೆ ಅನ್ವಯ ಜಿಬಿಎ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಂತಾಗಿದೆ. ಬಾಕಿ ಉಳಿದಿರುವ ಕೆಲ ಅಂಶಗಳನ್ನು ಸರ್ಕಾರ ಆದೇಶ ಹೊರಡಿಸಬೇಕಿದ್ದು, ಚುನಾಯಿತ ಆಡಳಿತ ಬರಲು ವೇದಿಕೆ ಕಲ್ಪಿಸಲಾಗಿದೆ.
ನಾಮಫಲಕ ಅನಾವರಣ:
ನಗರದ ಕಿತ್ತೂರುರಾಣಿ ಚನ್ನಮ್ಮ ವೃತ್ತದಲ್ಲಿರುವ ಕಾರ್ಪೊರೇಷನ್ ಕಚೇರಿಯ ಕಟ್ಟಡದ ಮೇಲೆ ಈವರೆಗೂ ಇದ್ದ ಬಿಬಿಎಂಪಿ ನಾಮಫಲಕವನ್ನು ತೆಗೆದುಹಾಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಫಲಕವನ್ನು ಅಳವಡಿಸಲಾಯಿತು. ಈ ವೇಳೆ ಹಾಜರಿದ್ದ ಜಿಬಿಎ ಮುಖ್ಯ ಆಯುಕ್ತರು, ದಿನ ಕಳೆದಂತೆ ಹೊಸ ಪಾಲಿಕೆಗಳ ಆಡಳಿತ ಸುಸೂತ್ರವಾಗಿ ನಡೆಯಲಿದೆ. ನಾಗರಿಕರಿಗೆ ಹಿಂದಿನಂತೆ ಜನಸ್ನೇಹಿ ಆಡಳಿತವನ್ನು ಜಿಬಿಎ ಮೂಲಕವೂ ನೀಡಲಾಗುವುದು ಎಂಬ ಸಂದೇಶ ರವಾನಿಸಿದರು.
ವಾರ್ಡ್ ವಿಂಗಡಣೆಗೂ ಆದೇಶ:
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಐದೂ ಪಾಲಿಕೆಗಳ ವ್ಯಾಪ್ತಿ ಹಾಗೂ ಗಡಿ ಸಂಬಂಧಿತ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ, ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ವಾರ್ಡ್ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ವಿಷಯವನ್ನು ದೃಢಪಡಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ನ.1ಕ್ಕೆ ವಾರ್ಡ್ ಪುನರ್‌ವಿಂಗಡಣೆಯ ಅಂತಿಮ ಅಧಿಸೂಚನೆ ಹಾಗೂ ನ.30ರೊಳಗೆ ವಾರ್ಡ್‌ವಾರು ಮೀಸಲು ನಿಗದಿ ಮಾಡಲಾಗುವುದು. ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಸಲ್ಲಿಸಿರುವ ಪ್ರಮಾಣಪತ್ರದಂತೆ ಚುನಾವಣೆ ನಡೆಸಲು ಬೇಕಾದ ಸಿದ್ಧತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್ ಖಾತೆಗಳೂ ಬದಲಾವಣೆ:
ಬಿಬಿಎಂಪಿ ಆಡಳಿತದ ಅವಧಿಯಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಜಿಬಿಎಗೆ ಬದಲಾವಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಇದರ ಅನ್ವಯ ಈವರೆಗೆ ಇದ್ದ 291 ಖಾತೆಗಳನ್ನು ಕಾಲಮಿತಿಯೊಳಗೆ ಬದಲಾಯಿಸಿಕೊಳ್ಳಬೇಕು. ಹಣದ ಸ್ವೀಕೃತಿಗೆ ಅವಕಾಶ ನೀಡಿದ್ದು, ಪೂರ್ವಾನುಮತಿ ಇಲ್ಲದೆ ಯಾವುದೇ ಮೊತ್ತವನ್ನು ಸೆಳೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಜತೆಗೆ ಹೊಸ ಪಾಲಿಕೆಗಳಲ್ಲಿ ಬ್ಯಾಂಕ್ ಖಾತೆಗಳು ಚಾಲ್ತಿಗೆ ಬಂದ ಬಳಿಕ ಮೊತ್ತವನ್ನು ವಿಭಾಗ ಮಾಡಿ ಹಂಚಿಕೆ ಮಾಡಲಾಗುತ್ತದೆ.
ಪಾಲಿಕೆ ಕಚೇರಿಗಳತ್ತ ಬಾರದ ಜನ:
ಹೊಸ ಪಾಲಿಕೆಗಳು ಅಸ್ತಿತ್ವಕ್ಕೆ ಬಂದ ಮೊದಲ ದಿನ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕಾಗಿ ಕಚೇರಿಗಳತ್ತ ಸುಳಿಯಲಿಲ್ಲ. ಹೊಸ ವ್ಯವಸ್ಥೆಗೆ ಬದಲಾಗುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿಯಿಂದ ಕೆಲಸ ಆಗದು ಎಂಬ ಭಾವನೆಯಿಂದಾಗಿ ಜನ ಕಾರ್ಪೊರೇಷನ್‌ಗಳಿಂದ ದೂರ ಉಳಿದರು. ಸಿಬ್ಬಂದಿಗಳು ಕೂಡ ಆಯಾ ಪಾಲಿಕೆಗೆ ವರ್ಗಾವಣೆ ಆಗಿದ್ದು, ತಮ್ಮ ವಿಭಾಗಗಳಲ್ಲಿ ಹೊಣೆ ವಹಿಸಿಕೊಳ್ಳುವ ತರಾತುರಿಯಲ್ಲಿದ್ದರು.
ಕಚೇರಿಗಳ ಬಗ್ಗೆ ಮಾಹಿತಿ ನಾಳೆ:
ಜಿಬಿಎ ಸೇರಿ ಹೊಸ ಪಾಲಿಕೆಗಳ ವಿವಿಧ ಕಚೇರಿ, ವಲಯ ಕಚೇರಿಗಳ ವಿಳಾಸ, ಅಧಿಕಾರಿಗಳ ಪದನಾಮ, ಸಿಬ್ಬಂದಿ ಹಾಗೂ ಸಹಾಯವಾಣಿ ಸಂಖ್ಯೆಯನ್ನು ಬುಧವಾರದಿಂದ ಜನರಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಿಂದೆ ಇದ್ದ ವಲಯವಾರು ಸಹಾಯವಾಣಿ ಸಂಖ್ಯೆಯನ್ನು ಹೊಸ ಪಾಲಿಕೆಗಳಿಗೆ ಹಂಚಲಾಗುತ್ತದೆ.