ಶೀಘ್ರದಲ್ಲಿ ರಾಜ್ಯಪತ್ರ ಪ್ರಕಟಣೆ ಹೊರಡಿಸಲಿ

4 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಘೋಷಣೆಯನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ತಾಂತ್ರಿಕ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಆರಂಭಿಸಬೇಕು ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಸದಸ್ಯ ದಾನಪ್ಪ ಕಬ್ಬೇರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಘೋಷಣೆ ಕುರಿತು ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸಬೇಕು. ಪ್ರತ್ಯೇಕ ಪಾಲಿಕೆಗೆ ಬೇಕಿರುವ ಎಲ್ಲ ಆಡಳಿತಾತ್ಮಕ ಕ್ರಮಗಳನ್ನು ಶೀಘ್ರ ಜರುಗಿಸಬೇಕಲ್ಲದೆ, ಮುಂಬರುವ ಬಜೆಟ್​ನಲ್ಲಿ ಧಾರವಾಡ ಪಾಲಿಕೆಗೆ ಹೆಚ್ಚಿನ ಅನುದಾನ ನೀಡಬೇಕು. ಇದರ ಜತೆಗೆ ಪಾಲಿಕೆಗೆ ಬೇಕಾದ ಮೂಲಭೂತ ಸೌಕರ್ಯ, ಸಿಬ್ಬಂದಿ ನೇಮಕಕ್ಕೆ ಸಹ ಸರ್ಕಾರ ಕ್ರಮವಹಿಸಬೇಕು ಎಂದರು.

ಪ್ರತ್ಯೇಕ ಪಾಲಿಕೆ ಘೋಷಣೆಯಿಂದ 62 ವರ್ಷಗಳಿಂದ ಧಾರವಾಡ ಜನತೆಗೆ ಆದ ತೊಂದರೆ ನಿವಾರಣೆಯಾದಂತಾಗಿದೆ. ಅನುದಾನ ಹಾಗೂ ಹಣಕಾಸಿನ ದೃಷ್ಟಿಯಿಂದಲೂ ಪಾಲಿಕೆಗೆ ಹಣದ ಹರಿವು ಬರುವುದರಿಂದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಇದಲ್ಲದೆ ಅಧಿಕಾರಿಗಳು ಸಹಜವಾಗಿ ಜನರಿಗೆ ಸಿಗುವುದರಿಂದ ಕಚೇರಿಗಳಿಗೆ ಓಡಾಡುವುದು ತಪ್ಪಿದಂತಾಗಲಿದೆ ಎಂದರು.

ವೇದಿಕೆ ಸಹ ಕಾರ್ಯದರ್ಶಿ ವಸಂತ ಅರ್ಕಾಚಾರ ಮಾತನಾಡಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ದಿನದಿಂದಲೂ ಶಾಸಕ ವಿನಯ ಕುಲಕರ್ಣಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಒತ್ತಡ ಹೇರಿದ್ದರು. ಇದಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಶಾಸಕರಾದ ಅಬ್ಬಯ್ಯ ಪ್ರಸಾದ, ಅರವಿಂದ ಬೆಲ್ಲದ ಸೇರಿ ಎಲ್ಲ ಹಂತದ ನಾಯಕರೂ ಹೋರಾಟಕ್ಕೆ ಸಹಕಾರ ನೀಡಿದ್ದಾರೆ. ಪಕ್ಷಾತೀತವಾಗಿ ಹೋರಾಟ ನಡೆಸಿದ್ದರಿಂದಲೇ ಫಲ ಸಿಗಲು ಸಾಧ್ಯವಾಗಿದೆ ಎಂದರು.

ವಿಠ್ಠಲ ಕಮ್ಮಾರ, ಶಂಕರ ನೀರಾವರಿ, ಅರವಿಂದ ಏಗನಗೌಡರ, ವೀರಣ್ಣ ಶೆಟ್ಟರ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net