ಗಾಯತ್ರಿದೇವಿ ಜಪದಿಂದ ಬುದ್ಧಿಗೆ ಪ್ರೇರಣೆ, ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿ ಆಶೀರ್ವಚನ,  ತಡಸ ತಪೋಭೂಮಿಯಲ್ಲಿ ರಜತ ಮಹೋತ್ಸವ

IMG_20250416_114201_406.jpg
Published on

ಹುಬ್ಬಳ್ಳಿ: ಶ್ರೀ ಗಾಯತ್ರಿದೇವಿಯ ಉಪಾಸನೆಯು ಅನಾದಿಕಾಲದಿಂದಲೂ ನಡೆಯುತ್ತ ಬಂದಿದೆ, ಸಂಪ್ರದಾಯ, ನಿಮಯದಂತೆ ದೇವಿಯ ಆರಾಧನೆ ಮಾಡಿದರೆ ಖಂಡಿತವಾಗಿಯು ಶಕ್ತಿ ತುಂಬುತ್ತದೆ, ಜಪದಿಂದ ಬುದ್ಧಿಗೆ ಒಳ್ಳೆಯ ಪ್ರೇರಣೆ ಉಂಟಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿ ಹೇಳಿದರು.

ಇಲ್ಲಿಗೆ ಸಮೀಪದ ತಡಸ ಕ್ರಾಸ್ ನಲ್ಲಿರುವ ಗಾಯತ್ರಿ ತಪೋಭೂಮಿಯಲ್ಲಿ ಶ್ರೀ ಗಾಯತ್ರಿ ಪ್ರತಿಷ್ಠಾಪನಾ ರಜತ ಮಹೋತ್ಸವ ಅಂಗವಾಗಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಶರೀರ ಇದ್ದಲ್ಲಿ ದೇವರು ನೆಲೆಸಿರುತ್ತಾನೆ. ದೇವತೆಗಳಿಗೆ ಶರೀರವೆಂಬುದು ಇರುವುದಿಲ್ಲ, ಎಲ್ಲಿಯೇ ಹೋಮ- ಹವನಗಳು ನಡೆದರೂ ದೇವತೆಗಳು ಆಹ್ವಾನಿಸಲ್ಪಟ್ಟು ಹವಿಸ್ಸನ್ನು ಸ್ವೀಕರಿಸುತ್ತಾರೆ. ದೇವ ಕಾರ್ಯಗಳನ್ನು ಮಾಡುವಲ್ಲಿ ದೇವರು ಸಂತುಷ್ಟನಾಗಿ ಅನುಗ್ರಹ ನೀಡುತ್ತಾನೆ. ದೇವರ ಅನುಗ್ರಹಕ್ಕಾಗಿ ಭಕ್ತರಿಂದ ಇಂತಹ ಧಾರ್ಮಿಕ ಕಾರ್ಯಗಳು, ಪರಂಪರೆ ನಿರಂತರವಾಗಿ ನಡೆಯುತ್ತಿರಬೇಕು ಎಂದರು.

ಧಾರ್ಮಿಕ ಆಚರಣೆಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆ ಹುಡುಕುತ್ತ ಹೋಗಬಾರದು. ಕೆಲವು ಆಚರಣೆಗಳಿಗೆ ಹಿನ್ನೆಲೆ ಸಿಗದೇ ಇರಬಹುದು. ಹಾಗೆಂದ ಮಾತ್ರಕ್ಕೆ ಅದು ಮೂಢ ನಂಬಿಕೆಯಾಗುವುದಿಲ್ಲ. ಅದರ ಹಿನ್ನೆಲೆಯು ನಮ್ಮ ಪೂರ್ವಜರಿಗೆ ಖಂಡಿತ ಗೊತ್ತಿರುತ್ತದೆ ಎಂದು ಪ್ರತಿಪಾದಿಸಿದರು.

ಯಾವ ಆಚರಣೆಗೆ ಶ್ರುತಿ, ಸ್ಮೃತಿ ಹಾಗೂ ಶಿಷ್ಟಾಚಾರಗಳು ಇರುವುದಿಲ್ಲವೋ ಅವುಗಳನ್ನು ನಾವು ಮೂಢನಂಬಿಕೆ ಎಂದು ಕರೆಯಬಹುದು. ಶಿಷ್ಟ ಆಚರಣೆಯಿಂದ ಭಕ್ತಿ ವೃದ್ಧಿಸುತ್ತದೆ. ಧರ್ಮ ಆಚರಣೆಯಿಂದ ಇದೊಂದೇ ಜನ್ಮಕ್ಕೆ ಮಾತ್ರವಲ್ಲ, ಜನ್ಮ ಜನ್ಮಾಂತರಕ್ಕೂ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಎಂದು ಸ್ವಾಮೀಜಿ ಸಲಹೆ ನೀಡಿದರು.

ಅನೇಕ ಪಾಲಕರು ತಮ್ಮ ಮಕ್ಕಳು ಮಾತೇ ಕೇಳುವುದಿಲ್ಲ ಎಂದು ಹೇಳುವುದುಂಟು. ಆದರೆ, ಧರ್ಮದ ವಿಚಾರದಲ್ಲಿ ಹಾಗೂ ಮಕ್ಕಳಿಗೆ ಸಂಸ್ಕೃತಿ ಕಲಿಸಿಕೊಡುವ ವಿಷಯದಲ್ಲಿ ಒಂದಿಷ್ಟು ಚಾತುರ್ಯ ಬೆಳೆಸಿಕೊಳ್ಳಬೇಕು. ಆ ಮೂಲಕ ಮಕ್ಕಳು ಮಾತು ಕೇಳುವಂತೆ ಮಾಡಬೇಕು ಎಂದು ಹೇಳಿದರು.

ಜೈಜೈ ಮಾತಾ: ಗಾಯತ್ರಿ ತಪೋಭೂಮಿ ಕ್ಷೇತ್ರದಲ್ಲಿ ರಜತೋತ್ಸವ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆದವು.

ಬೆಳಗ್ಗೆ ಯಜ್ಞಮಂಟಪದಲ್ಲಿ ಚತುರ್ವೇದ ಪಾರಾಯಣ, ಋಗ್ವೇದ ಸಂಹಿತಾ ಯಾಗ, ಯಜುರ್ವೇದ ಸ್ವಾಹಾಕಾರ, ಸುಂದರಕಾಂಡ, ರಾಮಾಯಣ, ಭಾಗವತ, ದೇವೀ ಭಾಗವತ ಪ್ರಸ್ಥಾನತ್ರಯ ಶಾಂಕರಭಾಷ್ಯ ಪಾರಾಯಣಗಳು, ಶತಚಂಡಿ ಪಾರಾಯಣ, ಮಹಾರುದ್ರ ಪಾರಾಯಣ ಮುಂತಾದ ಕಾರ್ಯಗಳು ಸಂಭ್ರಮದಿಂದ ಜರುಗಿದವು. ಅನೇಕ ಭಕ್ತರು ಭಾಗಿಯಾಗಿದ್ದರು.

ಶ್ರೀ ಗಾಯತ್ರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀಚಕ್ರಸ್ಥಾಪನೆ, ಶ್ರೀ ದಕ್ಷಿಣಾಮೂರ್ತಿ ಸ್ವಾಮಿ, ನವಗ್ರಹ ಹಾಗೂ ಧರ್ಮಧ್ವಜ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ ನಡೆದವು.

ಸೇರಿದ್ದ ಸಾವಿರಾರು ಭಕ್ತರು ಶ್ರೀಗಾಯತ್ರಿ ಮಾತಾ ಕೀ ಜೈ,, ಹರಹರ ಮಹಾದೇವ ಜಯಘೋಷಗಳನ್ನು ಮೊಳಗಿಸಿದರು.
ಫಲಸಮರ್ಪಣೆ:
ಗಾಯತ್ರಿ ತಪೋಭೂಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿನಾಯಕ ಆಕಳವಾಡಿ, ಉಪಾಧ್ಯಕ್ಷ ಎ.ವಿ. ಹರಪನಹಳ್ಳಿ ಇತರ ಧರ್ಮದರ್ಶಿಗಳು ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net