ಪುತ್ತೂರು: ಮಂಗಳೂರು ಚಿತ್ರಾಪುರ ಮಠದಲ್ಲಿ ಅಖಿಲ ಕರ್ನಾಟಕಾ ಬ್ರಾಹ್ಮಣ ಮಹಾಸಭಾ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅ.೨೬, ೨೭ರಂದು ಗಾಯತ್ರೀ ಸಂಗಮ ನಡೆಯುತ್ತಿದ್ದು, ಎಂಟು ಬ್ರಾಹ್ಮಣ ಸಮಾಜದ ಸಂಘಟನೆಯನ್ನು ಗಟ್ಟಿಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಅತಿಥಿ ಸತ್ಕಾರ ಸಮಿತಿಯ ಜಗನ್ನಿವಾಸ ರಾವ್ ಹೇಳಿದರು.
ಮನುಕುಲಕ್ಕೆ ಒಳಿತಾಗಬೇಕೆಂಬ ಸಂಕಲ್ಪದಲ್ಲಿ ಗಾಯತ್ರಿ ಯಜ್ಞವನ್ನು ನಡೆಸಲಾಗುತ್ತಿದೆ. ಎಂಟು ಬ್ರಾಹ್ಮಣ ಸಮಾಜದ ಋತ್ವಿಜರ ಕೂಡುವಿಕೆಯಲ್ಲಿ ಏಕ ಬೃಹತ್ ಯಜ್ಞಕುಂಡದಲ್ಲಿ ಯಾಗ ನಡೆಯಲಿದೆ. ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಎಲ್ಲ ರೀತಿಯ ರಕ್ಷಣೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಯುವಕ ಯುವತಿಯರನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ೨೬ರಂದು ಬೆಳಗ್ಗೆ ೧೧ರಿಂದ ಆದಿತ್ಯ ಯುವ ಸಂಗಮ ಕಾರ್ಯಕ್ರಮ ನಡೆಸುತ್ತಿದ್ದು, ಹಳೆಬೇರು ಹೂಸ ಚಿಗುರು ಸಂವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧ರಿಂದ ಗಾಯತ್ರೀ ಮಹಾತ್ಮೆ ಯಕ್ಷಗಾನ ತಾಳಮದ್ದಳೆ, ೩.೩೦ರಿಂದ ವೇದ ಮಾತಾ ಗಾಯತ್ರೀ ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ, ೫.೩೦ರಿಂದ ನೃತ್ಯಾಮೃತ, ಗಾನಾಮೃತ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಯತ್ರೀ ಸಂಗಮ ೨೦೨೪ ಅಧ್ಯಕ್ಷ ಮಹೇಶ್ ಕಜೆ ಮಾತನಾಡಿ ೨೭ರಂದು ಮಧ್ಯಾಹ್ನ ೧೧ರಿಂದ ನಡೆಯುವ ಧರ್ಮಸಭೆಯಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ಶ್ರೀಪಾದರು ಧರ್ಮ ಸಂದೇಶ ನೀಡಲಿದ್ದಾರೆ. ಯಕ್ಷ ಸಮಿತಿಯ ಗೌರವಾಧ್ಯಕ್ಷ ಅಶೀಕ್ ಹಾರನಹಳ್ಳಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಪ್ರಮುಖರಾದ ಶಿವಶಂಕರ ಭಟ್, ಲಕ್ಷ್ಮೀನಾರಾಯಣ, ಸದಾಶಿವ ಹೊಳ್ಳ ಉಪಸ್ಥಿತರಿದ್ದರು.