ನಾಡಿನ ಹಿತಕ್ಕಾಗಿ ಹೋಮ, ಹವನ ಅಗತ್ಯ: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

22_01_Mdy_01(Mahasaba)
Published on

ಮಂಡ್ಯ: ದೇಶ, ರಾಜ್ಯದ ಅಭಿವೃದ್ಧಿ, ಜನಹಿತಕ್ಕಾಗಿ ಹೋಮ, ಹವನಗಳು ಅಗತ್ಯ. ಜಿಲ್ಲಾ ಬ್ರಾಹ್ಮಣ ಸಭಾ ಒಳ್ಳೆಯ ಕೆಲಸ ಮಾಡುತ್ತಿದೆ. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಗಾಯತ್ರಿ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಆಯೋಜಿಸಿದ್ದ ಗಾಯತ್ರಿ ಹೋಮದ ಪೂರ್ವಭಾವಿಯಲ್ಲಿ ಮಾತನಾಡಿದರು. ಏ.1 ಮತ್ತು 2ರಂದು ಧಾರ್ಮಿಕ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಯಜ್ಞ, ಹೋಮಗಳು ನಡೆದಂಥ ಜಾಗ ಇದು. ಇದರಿಂದ ಒಳ್ಳೆಯದನ್ನು ನೋಡಲು ಸಾಧ್ಯ. ಆ ರೀತಿ ಎಲ್ಲರೂ ತೀರ್ಮಾನ ಮಾಡಿದ್ದೀರಿ. ಪಕ್ಷ ಬೇರೆ, ಪಕ್ಷಕ್ಕಿಂತಲೂ ಮೀರಿದ್ದು ಜಿಲ್ಲೆ. ಜಿಲ್ಲೆಯ ಜನ ಹಾಗೂ ಸಮಾಜ ಎಲ್ಲವೂ ಇದೆ. ಅನೇಕ ವಿಚಾರಗಳಲ್ಲಿ ಜಿಲ್ಲೆ ಹಿಂದುಳಿದಿದೆ. ಈ ಹೋಮದಿಂದ ಮತ್ತಷ್ಟು ಅಭಿವೃದ್ಧಿ ಕಾಣುವಂತಾಗಲಿ ಎಂದು ಆಶಿಸಿದರು.

ಚುನಾವಣಾ ಘಟ್ಟದಲ್ಲಿ ನಾವೆಲ್ಲರೂ ಇರುತ್ತೇವೆ. ಆದರೂ ಬಿಡುವು ಮಾಡಿಕೊಂಡು ಬಂದು ಹೋಮದಲ್ಲಿ ಪಾಲ್ಗೊಳ್ಳುತ್ತೇವೆ. ಚುನಾವಣೆಯಲ್ಲಿ ಯಾರು ಗೆದ್ದು ನಾಯಕರಾಗುತ್ತಾರೋ ಅವರು ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ಜಿಲ್ಲೆಯ ಜನರಿಗಾಗಿ ಒಳ್ಳೆಯದನ್ನು ಬಯಸಲಿ, ಅವರಿಗೆ ದೇವರ ಆಶೀರ್ವಾದ ಇರಲಿ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತೆ ಎಂದು ಹೇಳಿದರು.

ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ, ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಬೆಳ್ಳೂರು ಎಸ್.ಶಿವರಾಮು, ಜಿಲ್ಲಾಧ್ಯಕ್ಷ ಎಸ್. ಶಂಕರನಾರಾಯಣಶಾಸ್ತ್ರಿ, ಕಾರ್ಯದರ್ಶಿ ಕೆ.ಪ್ರಭಾಕರ್, ಮಾಜಿ ಸಚಿವರಾದ ಎಂ.ಎಸ್.ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ಗಣಿಗ ರವಿಕುಮಾರ್, ಅಂಜನಾ ಶ್ರೆಕಾಂತ್, ಡಾ.ಎಚ್.ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net