

ಬ್ಯಾಡಗಿ: ನಾಡಿನ ಪ್ರಸಿದ್ಧ ವಾಗ್ಮಿ ಹಾಗೂ ಮಹಾತಪಸ್ವಿ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಇಲ್ಲಿನ ಎಸ್ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ನ. 13 ರಿಂದ 24 ವರೆಗೆ 12 ದಿನಗಳ ಕಾಲ ಜರುಗಲಿದೆ ಎಂದು ಪ್ರವಚನ ಸೇವಾ ಸಮಿತಿ ಉಸ್ತುವಾರಿ ಉದ್ಯಮಿ ಗಡಗಿ ಸಂಗಣ್ಣ ತಿಳಿಸಿದರು.
ಇಲ್ಲಿನ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ನ. 13 ರಿಂದ 24 ವರೆಗೆ ಪ್ರತಿದಿನ ಸಂಜೆ 6ರಿಂದ 7 ಗಂಟೆಯವರೆಗೆ ಅಧ್ಯಾತ್ಮಿಕ ಪ್ರವಚನ ನಡೆಯಲಿದೆ. ಪ್ರತಿದಿನ ಬೆಳಗ್ಗೆ 6.30 ರಿಂದ 8 ಗಂಟೆವರೆಗೂ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸರಳ ಕಾರ್ಯಕ್ರಮಕ್ಕೆ ಆದ್ಯತೆ: ಗವಿಸಿದ್ಧ ಶ್ರೀಗಳ ಹೆಸರಲ್ಲಿ ದೇಣಿಗೆ ಸಂಗ್ರಹಿಸುವುದು ಬೇಡ, ಜನರು ಪ್ರವಚನಕ್ಕೆ ಮುಖ್ಯ ಆದ್ಯತೆ ನೀಡಬೇಕು. ಎಲ್ಲಿಯೂ ಬ್ಯಾನರ್, ಬಂಟಿಂಗ್ಸ್ಗಳ ಅಬ್ಬರ ಬೇಡ, ಅಗತ್ಯವಿದ್ದಷ್ಟನ್ನು ಮಾತ್ರ ಅಳವಡಿಸೋಣ. ಸ್ವಾಮೀಜಿಯವರ ಸ್ವಾಗತಕ್ಕೆ ಭಾಜಾ ಭಜಂತ್ರಿ, ಹಾರ-ತುರಾಯಿ, ಸನ್ಮಾನ, ಶಾಲು ಹಾಕಲು ಅವಕಾಶವಿಲ್ಲ. ವೇದಿಕೆಯಲ್ಲಿ ಪ್ರವಚನ ನೀಡುವ ಶ್ರೀಗಳು ಒಬ್ಬರೆ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಚಿಕ್ಕೇನಕೊಪ್ಪದ ಶಿವಶಾಂತೇಶ್ವರ ಶರಣರು ಪ್ರತಿದಿನ ಭಜನೆ ಮಾಡಲಿದ್ದು, ಇತರೆ ಸಂಗೀತಗಳಿಗೆ ಅವಕಾಶವಿರುವುದಿಲ್ಲ. ಗವಿಸಿದ್ಧ ಶ್ರೀಗಳು ಮನೆ ಬಳಿ ಪಾದಯಾತ್ರೆ ಬಂದಾಗ ತಮ್ಮ ಮನೆಯ ಮುಂದೆ ರಂಗೋಲಿ ಸಿಂಗರಿಸಿ, ದೀಪ ಹಚ್ಚಿ ಸ್ವಾಗತಿಸಿ ನಿಂತಲ್ಲಿಯೇ ನಮಿಸಬೇಕು. ಯಾರೊಬ್ಬರೂ ಶ್ರೀಗಳ ಬಳಿ ಬರಬಾರದು ಹಾಗೂ ವೈಯಕ್ತಿಕ ಭೇಟಿ, ಪಾದಪೂಜೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಹೂವಿನ ಹಡಗಲಿ ಮಠದ ಡಾ.ಶಾಂತವೀರ ಶ್ರೀಗಳು, ಮುಪ್ಪಿನೇಶ್ವರ ಮಠದ ಮಲ್ಲಿಕಾರ್ಜುನ ಶ್ರೀಗಳು, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ವರ್ತಕ ಕುಮಾರಗೌಡ್ರ ಪಾಟೀಲ, ಬಸವರಾಜ ಛತ್ರದ, ಮುರಿಗೆಪ್ಪ ಶೆಟ್ಟರ, ಗಂಗಣ್ಣ ಎಲಿ, ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಶಾಸ್ತ್ರೀಗಳಾದ ರಾಚಯ್ಯ ಓದಿಸೋಮಠ, ಪ್ರಭು ಹಲಗಣ್ಣನವರರ, ಇತರರಿದ್ದರು.