ಕೋರ್ಟ್​ನಿಂದ ಗವಿಮಠಕ್ಕೆ ವಿಚ್ಛೇಧನ ಪ್ರಕರಣ

gavisiddeswara swamiji koppal gavimath court divorce case judge
Published on
  • ಗವಿಶ್ರೀಗಳಿಗೆ ಸಂಧಾನ ನಡೆಸುವಂತೆ ಜಡ್ಜ್​ ಮನವಿ
  • ಸಾರ್ವಜನಿಕ ಮೆಚ್ಚುಗೆ ಪಡೆದ ಕೋರ್ಟ್​ ನಡೆ

ಕೊಪ್ಪಳ: ವಿಚ್ಛೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ಬುದ್ಧಿ ಮಾತು ಹೇಳಿದ ನ್ಯಾಯಾಧೀಶರು ಜೀವನ ಪಾಠ ಮಾಡಿದ್ದಾರೆ. ದಾಂಪತ್ಯದಲ್ಲಿ ಕಾನೂನಿಗಿಂತ ಪರಸ್ಪರ ಹೊಂದಾಣಿಕೆ ಅಗತ್ಯವೆಂದು ಮನವರಿಕೆ ಮಾಡಿಸಿದ್ದು, ದಂಪತಿಗೆ ಸಂಧಾನ ನಡೆಸುವಂತೆ ಗವಿಮಠದ ಅಭಿನವ ಗವಿಶ್ರೀಗಳಿಗೆ ಮನವಿ ಮಾಡಿ ಪತ್ರ ಬರೆಯುವಂತೆ ತಿಳಿಸಿರುವುದಕ್ಕೆ ಸಾರ್ವಜನಿಕರು ಶ್ಲಾನೆ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡ ಹೈಕೋರ್ಟ್​ನಲ್ಲಿ ವಿವಾಹ ವಿಚ್ಛೇಧನ ಪ್ರಕರಣವೊಂದರಲ್ಲಿ ಇಬ್ಬರು ನ್ಯಾಯಾಧೀಶರು ವಿಚಾರಣೆ ನಡೆಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ದಂಪತಿ ವಿಚ್ಛೇಧನ ಏಕೆ ಬೇಕೆಂದು ವಿಚಾರಿಸಿದ ನ್ಯಾಯಾಧೀಶರು, ಪ್ರಕರಣದಲ್ಲಿ ಡಿವೋರ್ಸ್​ ನೀಡುವಂಥ ಅಂಶಗಳಿಲ್ಲ. ಸಂಸಾರದಲ್ಲಿ ಸಣ್ಣಪುಟ್ಟ ಮನಸ್ತಾಪ ಬರುವದು ಸಹಜ. ಅದನ್ನೇ ಮುಂದಿರಿಸಿಕೊಂಡು ಬಿಡುಗಡೆ ಮಾಡಿಕೊಳ್ಳಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ.

ಯಾವುದೇ ಬಲವಾದ ಕಾರಣವಿಲ್ಲದೇ ವಿವಾಹ ಸಂಬಂಧ ಮುರಿದುಕೊಂಡರೆ ನಮ್ಮ ಸಂಸತಿಗೆ ಶೋಭೆಯಲ್ಲ. ಇಬ್ಬರು ವಿದ್ಯಾವಂತರಿದ್ದೀರಿ. ಆಪ್ತ ಸಮಾಲೋಚನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊತ್ತು ಬಂದ ಜೋಡಿಗಳು ಸಂಧಾನದ ಬಳಿಕ ಮತ್ತೆ ಒಂದಾಗಿ ಸುಖ ಸಂಸಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಗವಿಶ್ರೀಗಳಿಗೆ ಮನವಿ : ಸಾಮಾನ್ಯ ಸಂಧಾನಕಾರರನ್ನು ಹೊರತುಪಡಿಸಿ ಬಹಳ ತಿಳಿದವರು, ವಿಚಾರವಂತರ ಬಳಿ ಆಪ್ತ ಸಮಾಲೋಚನೆಗೆ ಒಳಗಾಗುವಂತೆ ನ್ಯಾಯಾಧೀಶರು ತಿಳಿಸಿದ್ದಾರೆ. ಬಳಿಕ ಸತಿ&ಪತಿ ಇಬ್ಬರೂ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ತೆರಳಿ ಸಮಸ್ಯೆ ಹೇಳಿಕೊಳ್ಳುವಂತೆ ಸೂಚಿಸಿದ್ದಾರೆ. ಅವರಿಗೆ ನೀವಿಬ್ಬರೂ ದೂರ ಆಗುವಂಥ ಅಂಶಗಳು ಮನವರಿಕೆ ಆದಲ್ಲಿ ಮುಂದೆ ವಿಚಾರ ಮಾಡೋಣ. ಪ್ರಬಲ ಅಂಶಗಳಿಲ್ಲದೇ ಪ್ರಕರಣ ನಡೆಸಿದರೆ ಸಮಯ ವ್ಯರ್ಥವಾಗಲಿದೆ. ಡಿವೋರ್ಸ್​ ಬಳಿಕ ಇಬ್ಬರ ಜೀವನ ಚೆನ್ನಾಗಿರಲಿದೆ ಎಂಬ ಗ್ಯಾರಂಟಿಯೂ ಇರುವುದಿಲ್ಲವೆಂದು ತಿಳಿಸಿದ್ದಾರೆ. ಈ ಬಗ್ಗೆ ಗವಿಶ್ರೀಗಳಿಗೆ ಪತ್ರ ಬರೆದಿದ್ದು, ಸೆ.22ರಂದು ಭೇಟಿಯಾಗುವಂತೆ ತಿಳಿಹೇಳಿ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net