

ಕೊಪ್ಪಳ: ಜಾತ್ರೋತ್ಸವದೊಂದಿಗೆ ಸಾಮಾಜಿಕ ಕಾರ್ಯ ತ್ರಿವಿಧ ದಾಸೋಹಕ್ಕೆ ಹೆಸರಾಗಿರುವ ನಗರದ ಗವಿಮಠ ಈ ವರ್ಷ ಅಜ್ಜನ ಜಾತ್ರೆ ನಿಮಿತ್ತ ಅಂಗಾಂಗ ದಾನ ಜಾಗೃತಿ ಕೈಗೊಳ್ಳಲು ಮುಂದಾಗಿದೆ.
ಮುಂದಿನ ವರ್ಷ ಜ.4ರಿಂದ 10ರವರೆಗೆ ಜಾತ್ರೋತ್ಸವ ನಡೆಯಲಿದೆ. ಕಳೆದೆರಡು ವರ್ಷ ಕೋವಿಡ್‌ನಿಂದ ಜಾತ್ರೆ ರಂಗು ಕಳೆದುಕೊಂಡಿದ್ದರೂ ಸಾಮಾಜಿಕ ಕಾರ್ಯ ಮಾತ್ರ ಕೈ ಬಿಟ್ಟಿರಲಿಲ್ಲ. 2016ರಿಂದ ನಿರಂತರವಾಗಿ ಪ್ರತಿ ವರ್ಷ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಬರಲಾಗಿದೆ. ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಆರಂಭವಾದ ಕಳಕಳಿ ಕಾರ್ಯ ರಕ್ತದಾನ, ನೇತ್ರದಾನ, ಒತ್ತಡ ನಿವಾರಣೆ, ವೃಕ್ಷೋತ್ಸವ, ಜಲ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್‌ನಿಂದ ಸರಳವಾಗಿ ಜಾತ್ರೆ ಆಚರಣೆಯಾದರೂ, ಗಿಣಿಗೇರಿ ಕೆರೆ ಅಭಿವೃದ್ಧಿ, ಅಡವಿಹಳ್ಳಿ ಗ್ರಾಮ ಅಭಿವೃದ್ಧಿಗೆ ಶ್ರೀಗಳು ಸಂಕಲ್ಪ ಮಾಡಿದ್ದರು. ಜತೆಗೆ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ 24*7 ಗ್ರಂಥಾಲಯ ಸೌಲಭ್ಯ ಕಲ್ಪಿಸಿದ್ದಾರೆ.
ಈ ವರ್ಷ ‘ಪರೋಪಾಕಾರಾರ್ಥಂ ಇದಂ ಶರೀರಂ’ ಘೋಷ ವಾಕ್ಯದೊಂದಿಗೆ ಅಂಗಾಂಗ ದಾನ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಹುಟ್ಟಿದ ನಂತರ ಸಾವು ಖಚಿತ. ಆದರೆ, ಇರುವಾಗ ಮತ್ತು ಸತ್ತ ನಂತರವೂ ಇನ್ನೊಬ್ಬರ ಬಾಳಿಗೆ ಬೆಳಕಾಗುವ ಅವಕಾಶ ಎಲ್ಲರಿಗಿದೆ. ಬದುಕಿದ್ದಾಗಲೇ ಅಂಗಾಂಗ ದಾನ ಮಾಡಲು ಅವಕಾಶವಿದ್ದು, ಮರಣದ ನಂತರ ನಮ್ಮ ದೇಹದ ಅಂಗಗಳು ಇತರರಿಗೆ ಜೀವ ನೀಡಬಲ್ಲವು. ಇದೇ ಉದ್ದೇಶ ಇಟ್ಟುಕೊಂಡು ಈ ವರ್ಷ ಜಾತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಪಿಯು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ: ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೂಲಕ ಅಂಗಾಂಗ ಜಾಗೃತಿ ಮೂಡಿಸಲು ಯೋಜಿಸಲಾಗಿದೆ. ಡಿ.15ರಂದು ಎಲ್ಲ ಪಿಯು ಕಾಲೇಜುಗಳಲ್ಲಿ ಅಂಗಾಂಗ ದಾನ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ. ಡಿ.19ರಂದು ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ಇರಲಿದೆ. ಜ.4ರಂದು ವಿದ್ಯಾರ್ಥಿಗಳು, ನಗರ, ಸ್ಥಳೀಯ ಸಂಸ್ಥೆಗಳು, ವಿವಿಧ ಸಂಘಟನೆಗಳ ಮೂಲಕ ಜಿಲ್ಲಾದ್ಯಂತ ಜಾಗೃತಿ ಜಾಥಾ ನಡೆಯಲಿದೆ. ಕೊಪ್ಪಳದಲ್ಲಿ ಸಾರ್ವಜನಿಕ ಮೈದಾನದಿಂದ ಅಶೋಕ ವೃತ್ತ, ಗಡಿಯಾರ ಕಂಬ ಮಾರ್ಗವಾಗಿ ಗವಿಮಠ ಆವರಣದವರೆಗೆ ಸಾವಿರಾರು ವಿದ್ಯಾರ್ಥಿಗಳ ಮೂಲಕ ಜಾಥಾ ನಡೆಯಲಿದೆ.
ಜ.8ರಂದು ಮಹಾ ರಥೋತ್ಸವ: ದಕ್ಷಿಣ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರೋತ್ಸವ 2023ರ ಜ.4ರಿಂದ 10ವರೆಗೆ ಜರುಗಲಿದೆ. ಜ.4ರಂದು ಸಂಜೆ 5ಗಂಟೆಗೆ ಬಸವಪಟ, ಜ.5ರಂದು ತೆಪ್ಪೋತ್ಸವ, 6ರಂದು ಪಲ್ಲಕ್ಕಿ ಉತ್ಸವ ಹಾಗೂ ದೇವಿಗೆ ಉಡಿ ತುಂಬುವುದು, 7ರಂದು ಲಘು ರಥೋತ್ಸವ, 8ರಂದು ಮಹಾ ರಥೋತ್ಸವ, 9ರಂದು ಬಳಗಾನೂರು ಶ್ರೀಗಳಿಂದ ದೀರ್ಘದಂಡ ನಮಸ್ಕಾರ, ಧಾರ್ಮಿಕ ಗೋಷ್ಠಿ ಮತ್ತು ಮದ್ದು ಸುಡುವ ಕಾರ್ಯಕ್ರಮ, ಜ.10ರಂದು ಸಮಾರೋಪ ಸಮಾರಂಭ ಜರುಗಲಿದೆ. ಕೋವಿಡ್‌ನಿಂದ ಕಳೆದೆರಡು ವರ್ಷ ಜಾತ್ರೋತ್ಸವ ಅಷ್ಟೊಂದು ಅದ್ದೂರಿಯಾಗಿರಲಿಲ್ಲ. ಈ ವರ್ಷ ಮೊದಲಿನಂತೆ ವೈಭವದಿಂದ ನೆರವೇರಲಿದೆ.