

ಅಂಕೋಲಾ: ಕನ್ನಡ ಭಾಷೆ ಸಂವರ್ಧನೆ ಮತ್ತು ಶಿಕ್ಷಣ ಪ್ರಸರಣಕ್ಕಾಗಿ ಅವಿರತ ಶ್ರಮಿಸಿದ್ದ ದಿ. ಸ.ಪ. ಗಾಂವಕಾರ ಅವರ ಕಾರ್ಯ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ನಾಡವರ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಕೋಲೆಯ ಕರ್ನಾಟಕ ಸಂಘ ಮತ್ತು ದೀನಬಂಧು ಸ.ಪ. ಗಾಂವಕಾರ ದತ್ತಿ ನಿಧಿ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವರು ತಮ್ಮ ಸಾಧನೆಯ ಮೂಲಕ ಸಾವಿನ ನಂತರವೂ ಜೀವಂತವಾಗಿ ಇರುತ್ತಾರೆ, ಸ್ಮರಣೀಯ ರಾಗುತ್ತಾರೆ. ಅಂಥವರ ಸಾಲಿಗೆ ಸ.ಪ. ಗಾಂವಕಾರ್ ಅವರು ಸೇರುತ್ತಾರೆ. ಅಂದಿನ ಕಾಲದಲ್ಲಿ ಬಡಮಕ್ಕಳಿಗೆ ವಿದ್ಯೆ ಸಿಗಬೇಕೆಂಬ ಹಂಬಲತೊಟ್ಟು ನೆರವು ನೀಡಿದ ಅವರ ಕಾರ್ಯ ನಿಜಕ್ಕೂ ಮಾದರಿ ಎಂದರು.
ಇದೇ ವೇಳೆ ಹೊರಟ್ಟಿ ಅವರು ತಮ್ಮ ಅವ್ವ ಟ್ರಸ್ಟ್ ಮೂಲಕ ದತ್ತಿನಿಧಿಗೆ 10 ಸಾವಿರ ರೂ. ದೇಣಿಗೆ ನೀಡಿದರು.
ಸ.ಪ. ಗಾಂವಕಾರ್ ಅವರ ಮೊಮ್ಮಗ ವಕೀಲ ಪ್ರದೀಪ ಕೃಷ್ಣದೇವ ಗಾಂವಕಾರ ಮಾತನಾಡಿ, ಸಮಾ ಜಕ್ಕೆ ಅಜ್ಜ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಸಮಿತಿ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಶಾಂತರಾಮ ನಾಯಕ ಹಿಚ್ಕಡ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರಥಮ ವರ್ಷದ ದಿ. ಸ.ಪ. ಗಾಂವಕಾರ ದತ್ತಿನಿಧಿ ಪ್ರಶಸ್ತಿಯನ್ನು ಜನಪದ ಸಾಹಿತಿ ಡಾ. ಎನ್.ಆರ್. ನಾಯಕ ಅವರಿಗೆ ಪ್ರದಾನ ಮಾಡಲಾಯಿತು. ದತ್ತಿ ನಿಧಿ ಸಮಿತಿ ಅಧ್ಯಕ್ಷ ಕೆ.ವಿ.ನಾಯಕ ದತ್ತಿನಿಧಿ ಸ್ಥಾಪನೆಯ ಉದ್ದೇಶ ವಿವರಿಸಿದರು.
ಸುಖದ ನಾಯಕ ಪ್ರಾರ್ಥಿಸಿದರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಬಂಟ್, ಅಧ್ಯಕ್ಷ ವಿಠ್ಠಲದಾಸ ಕಾಮತ್ ಪರಿಚಯಿಸಿದರು. ಉಪಾಧ್ಯಕ್ಷೆ ಹೊನ್ನಮ್ಮ ನಾಯಕ, ಸದಸ್ಯರಾದ ರವೀಂದ್ರ ಕೇಣಿ, ವಿನಾಯಕ ಹೆಗಡೆ ನೆನಪಿನ ಕಾಣಿಕೆ ಸಲ್ಲಿಸಿದರು.
ಮಹೇಶ ನಾಯಕ, ರಾಜೇಶ ನಾಯಕ ನಿರ್ವಹಿಸಿದರು. ಜಿ.ಆರ್.ನಾಯಕ,ಎಸ್.ಆರ್.ನಾಯಕ, ಪ್ರವೀರ ನಾಯಕ, ಶಾಂತಿ ನಾಯಕ ಉಪಸ್ಥಿತರಿದ್ದರು.
2024ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಅನುಪಮಾ ಈಶ್ವರ ಗೌಡ ಕವನ ಶಂಕರ ಗೌಡ, ಸರಿತಾ ಎಸ್.ಗೌಡ, ಸಂಭ್ರತಾ ರಾಯ್ಕರ ಮತ್ತು ಅಕ್ಷತಾ ಶೆಟ್ಟಿ, ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದ ಮಾನ್ಯ ಮಂಜುನಾಥ ನಾಯ್ಕ ಮತ್ತು ಶ್ರೇಯಾ ನಾಯ್ಕರಿಗೆ ಪುರಸ್ಕಾರ ನೀಡಲಾಯಿತು.