

ಶಿವಮೊಗ್ಗ: ಯುವ ನಟ ಸಮರ್ಜಿತ್ ಮತ್ತು ನಾಯಕಿ ಸಾನ್ಯಾ ಅಯ್ಯರ್ ಅಭಿನಯದ ಗೌರಿ ಸಿನಿಮಾ ಜುಲೈನಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ. ಅಕ್ಕನ ನೆನಪಿಗಾಗಿ ಸಿನಿಮಾಕ್ಕೆ ಗೌರಿ ಟೈಟಲ್ ಇಡಲಾಗಿದೆ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದರು.
ನನ್ನ ಪುತ್ರ ಸಮರ್ಜಿತ್ ಅಭಿನಯದ ಚೊಚ್ಚಲ ಸಿನಿಮಾ ಇದು. ಸಾನ್ಯಾ ಅಯ್ಯರ್‌ಗೂ ಮೊದಲ ಚಿತ್ರ. ಇಬ್ಬರ ಕಾಂಬಿನೇಷನ್‌ನಲ್ಲಿ ಅತ್ಯುತ್ತಮವಾಗಿ ಚಿತ್ರ ಮೂಡಿಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೌರಿ ಸಿನಿಮಾ ನನ್ನ ಸಿನಿ ಜೀವನದ ಅತ್ಯುತ್ತಮ ಮತ್ತು ದೊಡ್ಡ ಬಜೆಟ್ ಸಿನಿಮಾ. ನಿಜ ಜೀವನದಲ್ಲಿ ನಡೆದ ಘಟನೆ ಆಧರಿಸಿ ಸಿನಿಮಾ ಮಾಡಿದ್ದು ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಸಮರ್ಜಿತ್ ಡಾನ್ಸ್ ಫೈಟ್‌ಗಳಲ್ಲಿ ಸಾಕಷ್ಟು ತರಬೇತಿ ಪಡೆದು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಅದ್ಬುತ ಸಂದೇಶವಿದೆ. ಅಕ್ಕ ಗೌರಿಯ ಸಿದ್ಧಾಂತ ಇದರಲ್ಲಿಲ್ಲ. ಇದು ಅಕ್ಕ ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರಿಟ್ಟಿದ್ದೇನೆ ಎಂದು ಹೇಳಿದರು.
ನಟ ಸಮರ್ಜಿತ್ ಮಾತನಾಡಿ, ನಾನು ಚಿಕ್ಕ ವಯಸ್ಸಿಂದ ಪುನೀತ್, ಸುದೀಪ್ ಸರ್ ಸಿನಿಮಾ ನೋಡಿ ನಾನೂ ಸಿನಿಮಾದಲ್ಲಿ ಕೆಲಸ ಮಾಡಬೇಕು ಅನಿಸಿತ್ತು. ನಟನೆ, ನಿರ್ದೇಶನ, ಫೈಟ್, ಡಾನ್ಸ್ ಬಗ್ಗೆ ದೇಶ ವಿದೇಶದಲ್ಲಿ ತರಬೇತಿ ಪಡೆದಿದ್ದೇನೆ ಎಂದರು. ನಟಿ ಸಾನ್ಯಾ ಅಯ್ಯರ್ ಸುದ್ದಿಗೋಷ್ಠಿಯಲ್ಲಿದ್ದರು.
ಜಗದ ಡೊಂಕ ನೀವೇಕೆ ತಿದ್ದುವಿರಿ…
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರಾಕರಿಸಿದರು. ಕೊಲೆ ಪ್ರಕರಣದಲ್ಲಿ ಎಫ್‌ಐಆರ್ ಆಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಈಗಾಗಲೇ ತನಿಖೆ ನಡೆಯುತ್ತಿದ್ದು, ಜಗದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ ಎಂದು ಬಸವಣ್ಣನ ವಚನದ ಮೂಲಕ ಪ್ರತಿಕ್ರಿಯಿಸಿದರು. ಡಾ. ರಾಜ್‌ಕುಮಾರ್, ಲಂಕೇಶ್ ಅವರಂತಹ ಅನೇಕ ಹಿರಿಯರು ಎಪ್ಪತ್ತರ ದಶಕದಲ್ಲಿ ಮಾಡಿದ ಅದ್ಭುತ ಸಾಧನೆಯ ಅಡಿಪಾಯ ಕನ್ನಡ ಚಿತ್ರರಂಗಕ್ಕಿದೆ. ಅದನ್ನು ಉಳಿಸಬೇಕು. ಯಶಸ್ಸು ಸಿಕ್ಕ ತಕ್ಷಣ ಕಳೆದುಹೋಗಬಾರದು. ನಿಮ್ಮ ತಲೆ ನಿಮ್ಮ ಭುಜದ ಮೇಲೆ ಇರಲಿ ಎಂದು ಸಿನಿಮಾ ಕ್ಷೇತ್ರಕ್ಕೆ ಬರುವ ಯುವ ಕಲಾವಿದರಿಗೆ ಇಂದ್ರಜಿತ್ ಲಂಕೇಶ್ ಕಿವಿಮಾತು ಹೇಳಿದರು.