

ವಿರಾಜಪೇಟೆ: ಐತಿಹಾಸಿಕ ಶ್ರೀ ಗೌರಿ- ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವ ಶೋಭಾಯಾತ್ರೆ ವಿರಾಜಪೇಟೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೂ ಅದ್ದೂರಿಯಾಗಿ ನಡೆಯಿತು.
ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಹೊತ್ತ ವಿದ್ಯುತ್ ದೀಪಗಳಿಂದ ಅಲಂಕೃತವಾದ 22 ಮಂಟಪಗಳ ಶೋಭಾಯಾತ್ರೆಯನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು. ಸುರಿಯುತ್ತಿದ್ದ ಮಳೆಯ ನಡುವೆಯೇ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಬಳಿಕ ಪವಿತ್ರ ಗೌರಿ ಕೆರೆಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಸೆ.19ರಂದು ನಗರದ 22 ಸಮಿತಿಗಳ ಮೂಲಕ ಪ್ರತಿಷ್ಠಾಪಿಸಲಾಗಿದ್ದ ಗೌರಿ- ಗಣೇಶ ಮೂರ್ತಿಗಳಿಗೆ ಕಳೆದ 10 ದಿನಗಳ ಕಾಲ ಬೆಳಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಗಡಿಯಾರ ಕಂಬದ ಬಳಿಯ ಶ್ರೀ ಗಣಪತಿ ದೇವಸ್ಥಾನ, ಜೈನರ ಬೀದಿದ ಶ್ರೀ ಬಸವೇಶ್ವರ ದೇವಸ್ಥಾನ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ವಿನಾಯಕ ಯುವಕ ಭಕ್ತ ಮಂಡಳಿ ಅಂಗಾಳ ಪರಮೇಶ್ವರಿ ದೇವಸ್ಥಾನ, ವಿಜಯ ವಿನಾಯಕ ಉತ್ಸವ ಸಮಿತಿ ದಕ್ಕನಿಮೊಹಲ್ಲಾ, ಕಾವೇರಿ ಗಣೇಶ ಉತ್ಸವ ಸಮಿತಿ ಮೂರ್ನಾಡು ರಸ್ತೆ, ನೇತಾಜಿ ಉತ್ಸವ ಸಮಿತಿ ನೆಹರು ನಗರ, ಗಣಪತಿ ಸೇವಾ ಸಂಘ ಗಣಪತಿ ಬೀದಿ, ವಿನಾಯಕ ಸೇವಾ ಸಮಿತಿ ಪಂಜರುಪೇಟೆ, ಜಲದರ್ಶಿನಿ ವಿನಾಯಕ ಸೇವಾ ಸಮಿತಿ ಆಂಜನೇಯ ದೇವಸ್ಥಾನ ಚಿಕ್ಕಪೇಟೆ, ವಿಘ್ನೇಶ್ವರ ಉತ್ಸವ ಸಮಿತಿ ಕುಕ್ಲೂರು, ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ, ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಗಣಪತಿ ಸೇವಾ ಸಮಿತಿ ಗಾಂಧಿನಗರ, ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ಹರಿಕೇರಿ, ವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಕೆ.ಬೋಯಿಕೇರಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಗೌರಿಕೆರೆ ಗಣಪತಿ ಸೇವಾ ಸಮಿತಿ ವಿರಾಜಪೇಟೆ, ವಿಘ್ನೇಶ್ವರ ಉತ್ಸವ ಸೇವಾ ಸಮಿತಿ ಪಟ್ಟಣ ಪಂಚಾಯಿತಿ, ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ವಿನಾಯಕ ಯುವ ಸಮಿತಿ ಶಿವಕೇರಿ, ಶ್ರೀ ಬಾಲಂಜನೇಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯಸ್ವಾಮಿ ರಸ್ತೆ ಸೇರಿದಂತೆ ಒಟ್ಟು 22 ವಿದ್ಯುತ್ ಅಲಂಕೃತ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಎಲ್ಲ ದೇವಾಲಯ ಸಮಿತಿಗಳೂ ಕಿವಿಗಡಕಿಚ್ಚುವ ಸಂಗೀತ ವ್ಯವಸ್ಥೆ ಮಾಡಿದ್ದವು. ಹಾಗಾಗಿ ಯುವಕರು ಸೇರಿದಂತೆ ಭಕ್ತರು ಮೆರವಣಿಗೆಯುದ್ದಕ್ಕೂ ಮಳೆಯನ್ನೂ ಲೆಕ್ಕಿಸದೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮಳೆಯ ಕಾರಣದಿಂದ ಗಣೇಶ ಮೂರ್ತಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿತ್ತು.
ಗೌರಿ- ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಪುರಸಭೆಯಿಂದ ಪವಿತ್ರ ಗೌರಿಕೆರೆಯನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಹಾಗೂ ತೆಪ್ಪದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿಂದ ಪೊಲೀಸ್ ಇಲಾಖೆ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.
ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಯಿಂದ ಡಿವೈಎಸ್‌ಪಿ-3, ಸರ್ಕಲ್‌ಇನ್ಸ್‌ಪ್ಯೆಕ್ಟರ್ 12, ಸಬ್‌ಇನ್ಸ್‌ಪ್ಯೆಕ್ಟರ್ 31, ಎಎಸ್‌ಐ 54, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್‌ಟೇಬಲ್ 357, ಮಹಿಳಾ ಸಿಬ್ಬಂದಿ 62, ಕೆಎಸ್‌ಆರ್‌ಪಿ 1, ಡಿಆರ್ 1, ಹೋಮ್‌ಗಾರ್ಡ್ 65, ಅಗ್ನಿ ಶಾಮಕದಳ ನಿಯೋಜಿಸಲಾಗಿತ್ತು. ಗಣೇಶೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಆದೇಶದಂತೆ ವಾಹನ ಸಂಚಾರದ ಮಾರ್ಗ ಬದಲಾಯಿಸಲಾಗಿತ್ತು.