

ಧಾರವಾಡ: ಪಿ.ಎಚ್.ಕ್ಯೂ ಶ್ರೀ.ದುರ್ಗಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಧಾರವಾಡ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಅವರು ಗೌರಿ ಗಣೇಶ ಹಾಗೂ ಈದ-ಮಿಲಾದ ಹಬ್ಬದ ಆಚರಣೆಯ ಪೂರ್ವಭಾವಿ ಸಭೆ ನಡೆಸಿದರು.
ಹಬ್ಬಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಡಿಜೆ ಸೌಂಡ ಸಿಸ್ಟಮ್ ನಿಷೇಧಿಸಲಾಗಿದ್ದು, ಡಿ.ಜೆ. ಸೌಂಡ ಸಿಸ್ಟಂ ಹಚ್ಚುವುದರಿಂದ ಗ್ರಾಮಗಳಲ್ಲಿಯ ವೃದ್ದರಿಗೆ, ಚಿಕ್ಕ ಮಕ್ಕಳಿಗೆ, ಗರ್ಭೀಣಿಯರಿಗೆ ತೊಂದರೆಯಾಗುತ್ತಿದೆ. ಡಿ.ಜೆ.ಹಚ್ಚುವ ಬದಲಾಗಿ ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಅಂತಹ ಸಾಂಪ್ರದಾಯಿಕ ಜನಪದ ಕಲೆಗಳನ್ನು ಮಾಡಿಸುತ್ತಾ ಪ್ರೋತ್ಸಾಹ ನೀಡಬೇಕು ಎಂದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಮೆರವಣಿಗೆಯ ಮಾರ್ಗವನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ತಿಳಿಸುವುದು ಮತ್ತು ಮಾರ್ಗ ಬದಲಾವಣೆ ಮಾಡುವುದು ಇದ್ದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿಬೇಕು. ಕೋಮು ಸೌಹಾರ್ಧತೆಗೆ ದಕ್ಕೆಯಾಗದಂತೆ ಎರಡೂ ಹಬ್ಬಗಳ ಆಚರಣೆಯನ್ನು ಮಾಡಲು ಅವರು ಸೂಚಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ಅಡೆತಡೆ ಆಗದಂತೆ ನೋಡಿಕೊಳ್ಳುವುದು. ಗಣೇಶ ಮಂಟಪದಲ್ಲಿ ಅಗ್ನಿ ಅವಗಡಗಳನ್ನು ತಪ್ಪಿಸಲು ಅಗ್ನಿ ಶಮನ ಸಲಕರಣೆಗಳನ್ನು ಕೂಡಲೇ ಸಿಗುವಂತೆ ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಗಣೇಶ ಹಬ್ಬದ ಆಚರಣೆ ಕಾಲಕ್ಕೆ ಸರಕಾರದ ಆದೇಶದಂತೆ ಹಸಿರು ಪಾಟಾಕಿಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಳಕೆ ಮಾಡಲು ಸೂಚಿಸಿ, ರಾತ್ರಿ 10 ಗಂಟೆಯ ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವುದು. ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಗಣೇಶ ವಿಸರ್ಜನೆ ಆಗುವವರೆಗೂ 24*7 ಎರಡು ಜನ ಸ್ವಯಂ ಸೇವಕರು ಇರುವಂತೆ ಆಯಾ ಮಂಡಳಿಯ ಮುಖಂಡರು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಮುಂಬರುವ ಗೌರಿ ಗಣೇಶ ಹಾಗೂ ಈದ ಮಿಲಾದ ಹಬ್ಬಗಳನ್ನು ಎಲ್ಲರೂ ಕಾನೂನಿನ ಜೌಕಟ್ಟಿನ ಅಡಿಯಲ್ಲಿ ಸರಕಾರ ನಿಯಾಮನುಸಾರ ಹಬ್ಬಗಳು ಶಾಂತಿಯುತವಾಗಿ ನಡೆಯುವಂತೆ ತಮ್ಮ ತಮ್ಮ ಊರಿನ ಯುವಕರಿಗೆ ತಿಳುವಳಿಕೆ ನೀಡಿ, ನೋಡಿಕೊಳ್ಳುವುದು. ಗೌರಿ ಗಣೇಶ ಹಾಗೂ ಈದ ಮಿಲಾದ ಹಬ್ಬಗಳಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ತೊಂದರೆ, ಸಮಸ್ಯೆಗಳು ಇದ್ದಲ್ಲಿ ಇಲಾಖೆಗೆ ಮುಂಚಿತವಾಗಿ ತಿಳಿಸುವುದು. ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಹಾಗೂ ವಿಸರ್ಜನೆಯ ರಸ್ತೆ ಮಾರ್ಗದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಆಯಾ ಮಂಡಳಿಯವರು ಸಿ.ಸಿ.ಕ್ಯಾಮರಾಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ ಸೇರಿದಂತೆ ಹೆಸ್ಕಾಂ, ಅಗ್ನಿ ಶಾಮಕ ಅಧಿಕಾರಿಗಳು, ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಹಿಂದು ಮತ್ತು ಮುಸ್ಲಿಂಮರು ಸೇರಿ 200 ಕ್ಕೂ ಹೆಚ್ಚು ಸಾರ್ವಜನಿಕರು ಇದ್ದರು.