

ಆಲೂರು: ಹಿಂದು ಸಂಪ್ರದಾಯದಲ್ಲಿ ಗೌರಿ ಹಬ್ಬ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ತವರು ಮನೆಯ ಬಾಗಿನವನ್ನು ನೆನಪು ಮಾಡುವ ಗೌರಿ ಹಬ್ಬ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ ಸ್ವರ್ಣಗೌರಿ ಹಬ್ಬದ ಅಂಗವಾಗಿ ಸ್ವರ್ಣಗೌರಿ ವ್ರತಾ ಆಚರಣೆ ಹಾಗೂ ಸ್ತ್ರೀಯರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೌರಿ ಹಬ್ಬ ಬಂತೆಂದರೆ ಸಾಕು ಮಹಿಳೆಯರಿಗೆ ಖುಷಿಯೋ ಖುಷಿ. ಕಾರಣ ತನ್ನ ತವರು ಮನೆಯಿಂದ ನೀಡುವ ಬಾಗಿನವನ್ನು ಎದುರು ನೋಡುವ ದಿನವಾಗಿದೆ. ಹೊಸ ಮದುವೆಯಾದ ವಧು ಕೂಡ ಗೌರಿ ಹಬ್ಬದಲ್ಲಿ ತನ್ನ ಹಿರಿಮೆಯನ್ನು ಮೆರೆಯುತ್ತಾಳೆ. ಇಂತಹ ಹಿರಿಮೆ, ಗರಿಮೆ ಮತ್ತು ವೈಶಿಷ್ಟ ಪೂರ್ಣತೆಯನ್ನು ಹೊಂದಿರುವಂತಹ ಗೌರಿ- ಗಣೇಶ ಹಬ್ಬವನ್ನು ಮಹಿಳೆಯರು ಸಕಲ ಸನ್ಮಂಗಳಕ್ಕಾಗಿ ಪೂಜೆ ಮಾಡುತ್ತಾರೆ ಎಂದರು.
ತವರು ಮನೆಯಿಂದ ಬಾಗಿನ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಗೌರಿ ಹಬ್ಬದಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಮರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಹಣ, ಆಸ್ತಿ ಇನ್ನಿತರ ಯಾವುದೋ ವಿಚಾರಗಳಿಂದ ಸಂಬಂಧಗಳು ಹಳಸಿ, ಕೆಲವು ಹೆಣ್ಣು ಮಕ್ಕಳಿಗೆ ತವರಿನಿಂದ ನೀಡುವ ಬಾಗಿನ ನಿಲ್ಲಿಸಲಾಗಿದೆ. ಅಂತಹ ನೊಂದ ಹೆಣ್ಣು ಮಗಳಿಗೆ ಶ್ರೀ ಸಂಸ್ಥಾನ ಹಿರೇಮಠದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಿನ ನೀಡಲಾಗಿದೆ ಎಂದರು.
ಮಹಾಗೌರಿಯನ್ನು ಪೂಜಿಸುವ ಸ್ವರ್ಣ ಗೌರಿ ವ್ರತವು ಸುಮಂಗಲಿಯರ ಪ್ರಮುಖ ಹಬ್ಬ. ಸ್ವರ್ಣಗೌರಿಯನ್ನು ನಿಯಮಾನುಸಾರ ಪೂಜಿಸುವ ಮುತ್ತೈದೆಯರಿಗೆ ದೀರ್ಘ ಸೌಮಾಂಗಲ್ಯ ಪ್ರಾಪ್ತಿಯಾಗಿ ಸಕಲ ಭಾಗ್ಯಗಳು ದೊರೆಯುತ್ತವೆ ಎಂದು ಶಾಸ್ತ್ರ ಗ್ರಂಥಗಳು ಉಲ್ಲೇಖಿಸಿವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ಸ್ವರ್ಣ ಗೌರಿ ವ್ರತ ಆಚರಣೆ ಮಾಡಿ ಸುಮಂಗಲಿಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ನೀಡಲಾಯಿತ. ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಶಿವಮೂರ್ತಿ ಸಿದ್ದಾಪುರ, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೋಟೆ ಮಹೇಶ್, ಯಶ್ವಂತ್ ಕಾರ್ಜುವಳ್ಳಿ, ಕುಮಾರ್ ಆನೆಗಳಲೆ, ಇಂಪನ ಸಂತೋಷ್ ಇತರರು ಇದ್ದರು.