

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಉಚ್ಛಾಟಿಸಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಹಾಗೂ ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ನಗರದ ತೊರವಿ ರಸ್ತೆಯ ನೇತಾಜಿ ಸುಭಾಷಚಂದ್ರ ಬೋಸ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಮಹಾನಗರ ಪಾಲಿಕೆ ಅನರ್ಹ ಸದಸ್ಯ ರಾಜಶೇಖರ ಕುರಿಯವರ ಮಾತನಾಡಿ, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣವನ್ನು ವಿರೋಧಿಸಿದ್ದಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರನ ಕುತಂತ್ರ, ಕುಮ್ಮಕ್ಕಿನಿಂದ ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವುದು ಹಿಂದು ಸಮುದಾಯಕ್ಕೆ ಮಾಡಿರುವ ಅಪಮಾನ. ಈ ತಪ್ಪು ನಿರ್ಧಾರ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಸದಾ ಹಿಂದುತ್ವ, ಹಿಂದುಗಳ ಪರವಾಗಿ ಗಟ್ಟಿಯಾಗಿ ನಿಲ್ಲುವ ನಾಯಕನನ್ನು ಪಕ್ಷದಿಂದ ತೆಗೆದು ಹಾಕಿದರೆ ಕಾರ್ಯಕರ್ತರಿಗೆ ಏನು ಸಂದೇಶ ನೀಡುತ್ತೀರಿ? ಕೂಡಲೇ ಪಕ್ಷದ ಹಾಗೂ ಹಿಂದು ಧರ್ಮ ಉಳಿವಿಗಾಗಿ ಮತ್ತು ಹಿಂದು ಕಾರ್ಯಕರ್ತರ ರಕ್ಷಣೆಗಾಗಿ ಪಕ್ಷಕ್ಕೆ ಮರಳಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಹಾಂತಗೌಡ ಪಾಟೀಲ, ಶ್ರೀಶೈಲ ಬುಕ್ಕಣ್ಣಿ, ಚಂದ್ರಶೇಖರ ಪತಂಗಿ, ಸದಾಶಿವ ದಾಸ್ಯಾಳ, ಐ.ಬಿ.ಪಾಟೀಲ, ಅಂಜು ಉಟಗಿ, ಸಿದ್ದನಗೌಡ ಬಿರಾದಾರ, ಮಲ್ಲು ಹಿಪ್ಪರಗಿ, ಬಸವರಾಜ ವಂಟಗೊಡಿ, ಸುಸ್ಮಿತಾ ವಾಂಡಕರ, ರಮೇಶ ರಾಠೋಡ, ಶಂಕರ ಹೂಗಾರ, ಚಂದ್ರಶೇಖರ ರುದ್ರಗೌಡರ, ಪ್ರಕಾಶ ಕದಂ, ಕಲ್ಲಯ್ಯ ಮಠಪತಿ ಮಿತ್ತಿತರರಿದ್ದರು.