ಸಿದ್ಧಾರೂಢ ಮಠದಲ್ಲಿ ದೇಶ, ವಿದೇಶಗಳ ಸಂತರ ಸಮಾಗಮ

New Siddharudhamath New
Published on

ಹುಬ್ಬಳ್ಳಿ : ಅನನ್ಯ ಭಕ್ತಿ, ಏಕನಿಷ್ಠೆ ಹಾಗೂ ಸಂಪೂರ್ಣ ಸಮರ್ಪಣೆ ಮಾಡುವ ಭಕ್ತರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ. ಅವರ ಯೋಗಕ್ಷೇಮದ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುತ್ತಾನೆ ಎಂದು ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವಿಶ್ವವೇದಾಂತ ಪರಿಷತ್​ ಕಾರ್ಯಕ್ರಮದಲ್ಲಿ ಶನಿವಾರದಂದು ಪ್ರವಚನ ನೀಡಿದ ಸಾಧು ಸಂತರು ಅಭಿಪ್ರಾಯಪಟ್ಟರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನುಡಿದ 'ಯೋಗಕ್ಷೇಮಂ ವಹಾಮ್ಯಹಮ್​' ಎಂಬ ವಾಕ್ಯ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಮಹಾತ್ಮರು, ಆಧುನಿಕ ಕಾಲದಲ್ಲಿ ಭಗವಂತನ ಅವತಾರವೇ ಆಗಿರುವ ಸಿದ್ಧಾರೂಢರು ತನ್ನನ್ನು ನಂಬಿ ಬಂದ ಭಕ್ತರನ್ನು ಎಂದಿಗೂ ಕೈ ಬಿಟ್ಟಿಲ್ಲ ಎಂದರು.

ಯುರೋಪ್​ ಕ್ರೊಯೇಸಿಯಾದಿಂದ ಆಗಮಿಸಿದ್ದ ಮಾತೆ ಡಾ.ಕ್ರೀಸ್ಟಿನಾ ಬಾಬಿಕ್​ ಮಾತನಾಡಿ,

ಶಿವ ಎಂದರೆ ಪ್ರಜ್ಞೆ. ನಮಃ ಶಿವಾಯ ಎಂಬ ಪಂಚಾಕ್ಷರ ಮಂತ್ರವೇ ಭಕ್ತರಿಗೆ ತಾರಕ. ಜಲ. ವಾಯು, ಅಗ್ನಿ, ಭೂಮಿ, ಆಕಾಶ ತತ್ವಗಳಿಂದ ರೂಪಿಸಲ್ಪಟ್ಟಿರುವ ಮನುಷ್ಯ ದೇಹವು ಪ್ರಕೃತಿಯೊಂದಿಗೆ ಸೇರಿಕೊಂಡಿದೆ. ಹಾಗಾಗಿ, ಅದು ಪರಮಾತ್ಮ ತತ್ವದಿಂದ ಬೇರೆಯಾಗಿಲ್ಲ ಎಂದರು.

ಗುರು ಕರುಣೆ ಇಲ್ಲದೇ ಜೀವನವಿಲ್ಲ. ಗುರುಕೃಪೆ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಶಿರಹಟ್ಟಿ ಫಕೀರಸ್ವಾಮಿ ಮಠದ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಮ್ಮ ದೇಹದಕಣಕಣವೂ ಸಿದ್ಧಾರೂಢಮಯ ಎಂಬ ಭಾವನೆ ಬಂದಾಗ ಮಾತ್ರ ಭಕ್ತರ ಉದ್ಧಾರ ಸಾಧ್ಯ ಎಂದು ಶ್ರೀ ಗಜದಂಡ ಸ್ವಾಮೀಜಿಗಳು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ರಾಜರಾಜೇಶ್ವರಿ ಪೀಠದ ಶ್ರೀ ಮಹಾಮಂಡಲೇಶ್ವರ ಜಯೇಂದ್ರ ಪುರಿ ಸ್ವಾಮೀಜಿ ಮಾತನಾಡಿ, ವೇದಾಂತದ ರೂಪವೇ ಶ್ರೀ ಸಿದ್ಧಾರೂಢರು ಎಂದರು.

ಉಪ್ಪಾರಟ್ಟಿಯ ಶ್ರೀ ನಾಗೇಶ್ವರ ಚೈತನ್ಯ ಸ್ವಾಮೀಜಿ, ಶಿಶುವಿನಹಳ್ಳಿಯ ಶಾಂತಮ್ಮ ತಾಯಿ ಪ್ರವಚನ ನೀಡಿದರು.

ಕೃತಿ ಬಿಡುಗಡೆ : ಶೃತಿ ವಿಚಾರ ಚಂದ್ರೋದಯ ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಧಾನಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಯುವಜನರಿಗೆ ವೇದಾಂತ ಪರಿಷತ್​ ಮಾರ್ಗದಶಿರ್ಯಾಗಲಿ ಎಂದು ಹಾರೈಸಿದರು.

ರಾಜನಳ್ಳಿ ಮಹಷಿರ್ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಶ್ರೀ ಗಜದಂಡ ಸ್ವಾಮೀಜಿ, ಶಿಸುವಿನಾಳದ ಶಾಂತಮ್ಮ ತಾಯಿ, ಕಸ್ತೂರಿ ತಾಯಿ, ತಿರುಪತಿಯ ಶ್ರೀ ಸ್ವರೂಪಾನಂದ ಸ್ವಾಮೀಜಿ, ಹುಬ್ಬಳ್ಳಿಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಹಾಗೂ ಇತರರನ್ನು ಟ್ರಸ್ಟ್​ ಕಮಿಟಿ ಪರವಾಗಿ ಸತ್ಕರಿಸಲಾಯಿತು.

ಇಂಚಲ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸತ್ಕಾರ ಸಮಾರಂಭದ ಸಾನಿಧ್ಯ ವಹಿಸಿದ್ದರು.

ಪರಿಷತ್​ ಗೌರವಾಧ್ಯಕ್ಷ ಡಿ.ಆರ್​.ಪಾಟೀಲ, ಟ್ರಸ್ಟ್​ ಚೇರ್ಮನ್​ ಬಸವರಾಜ ಕಲ್ಯಾಣಶೆಟ್ಟರ, ಮಂಜುನಾಥ ಮುನವಳ್ಳಿ, ಸರ್ವಮಂಗಳಾ ಪಾಠಕ, ಗೀತಾ ಕಲಬುಗಿರ್, ಬಾಳು ಮಗಜಿಕೊಂಡಿ, ಚೆನ್ನವಿರ ಮುಂಗುರವಾಡಿ, ವಿನಾಯಕ ಘೋಡಕೆ, ಉದಯಕುಮಾರ ನಾಯಕ, ವಸಂತ ಸಾಲಗಟ್ಟಿ, ಡಾ. ಗೋವಿಂದ ಮಣ್ಣೂರ, ಬಿ.ಆರ್​. ಬಾಗೇವಾಡಿ, ರಂಗಾ ಬದ್ದಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net